ADVERTISEMENT

ಮರಳು ಅಕ್ರಮ ಸಾಗಣೆ; ಡಿಸಿ, ಎಸ್ಪಿ ನೇತೃತ್ವದ ತಂಡ ದಾಳಿ

ಮೈಲಾರ ಬಳಿ 20 ತೆಪ್ಪಗಳ ವಶ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 16:28 IST
Last Updated 10 ಜನವರಿ 2023, 16:28 IST
ಮೈಲಾರ ಸೇತುವೆ ಬಳಿ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ದಂಧೆಕೋರರ ಮೇಲೆ ಅಧಿಕಾರಿಗಳ ತಂಡ ಮಂಗಳವಾರ ದಾಳಿ
ಮೈಲಾರ ಸೇತುವೆ ಬಳಿ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ದಂಧೆಕೋರರ ಮೇಲೆ ಅಧಿಕಾರಿಗಳ ತಂಡ ಮಂಗಳವಾರ ದಾಳಿ    

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮೈಲಾರ ಸೇತುವೆ ಬಳಿ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ದಂಧೆಕೋರರ ಮೇಲೆ ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿ 20 ತೆಪ್ಪಗಳನ್ನು ವಶಪಡಿಸಿಕೊಂಡಿದೆ.

ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದರು. ಸಂಜೆ ಆರಂಭವಾದ ಕಾರ್ಯಾಚರಣೆ ರಾತ್ರಿ ವರೆಗೂ ಮುಂದುವರಿದಿತ್ತು.

ಹಾವೇರಿ ತಾಲ್ಲೂಕಿನ ಮರಳು ದಂಧೆಕೋರರು ಮೈಲಾರ ಭಾಗದ ತೀರಕ್ಕೆ ಲಗ್ಗೆ ಇಟ್ಟು ಮರಳು ದೋಚುತ್ತಿದ್ದರು. ಹರಿವ ನದಿಯಲ್ಲೇ ತೆಪ್ಪಗಳ ಮೂಲಕ ಮರಳನ್ನು ತುಂಬಿ ಹಾವೇರಿ ತಾಲ್ಲೂಕಿನ ಕಂಚಾರಗಟ್ಟಿ, ಹಳ್ಯಾಳ ದಡಕ್ಕೆ ಸಾಗಿಸಿ ಮಾರಾಟಕ್ಕೆ ಕಳಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಆಧರಿಸಿ ಡಿಸಿ, ಎಸ್ಪಿ ಕಾರ್ಯಾಚರಣೆ ನಡೆಸಿದ್ದಾರೆ.

ADVERTISEMENT

ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಮರಳು ತುಂಬುತ್ತಿದ್ದ ಕಾರ್ಮಿಕರು ತೆಪ್ಪಗಳನ್ನು ನದಿಯಲ್ಲಿ ಮುಳುಗಿಸಿ ಈಜಿ ಪರಾರಿಯಾಗಿದ್ದಾರೆ. ಈ ವೇಳೆ ಕಾರ್ಮಿಕರು ಅಧಿಕಾರಿಗಳ ತಂಡದ ಮೇಲೆ ಕಲ್ಲು ತೂರಿ ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ. ನಂತರ ಅಧಿಕಾರಿಗಳು ಮೀನುಗಾರರ ನೆರವು ಪಡೆದು ನದಿಯಲ್ಲಿದ್ದ ತೆಪ್ಪಗಳನ್ನು ವಶಕ್ಕೆ ಪಡೆದಿದ್ದಾರೆ.

‘ಡಿಸಿ, ಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿ 20 ತೆಪ್ಪಗಳನ್ನು ವಶಕ್ಕೆ ಪಡೆದಿದ್ದೇವೆ. ಇನ್ನು ಕಾರ್ಯಾಚಣೆ ಮುಂದುವರಿದಿದ್ದು ಇನ್ನಷ್ಟು ತೆಪ್ಪಗಳು ಸಿಗುವ ಸಾಧ್ಯತೆಗಳಿವೆ. ನದಿ ತೀರದಲ್ಲಿದ್ದ ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಂಡಿದ್ದೇವೆ. ಈ ಕುರಿತು ಪ್ರಕರಣ ದಾಖಲಿಸಿ, ದಂಧೆಕೋರರ ಮೇಲೆ ಕ್ರಮಜರುಗಿಸುತ್ತೇವೆ’ ಎಂದು ತಹಶೀಲ್ದಾರ್ ಕೆ.ಶರಣಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.