ADVERTISEMENT

1 ಲಕ್ಷ ಹಕ್ಕುಪತ್ರ ವಿತರಣೆ ಇದೇ ಮೊದಲು: ಕೆಪಿಸಿಸಿ ವಕ್ತಾರ ಕಶ್ಯಪ್‌ ನಂದನ್

ಕೆಪಿಸಿಸಿ ವಕ್ತಾರ ಕಶ್ಯಪ್‌ ನಂದನ್‌ ಅಭಿಮತ–ಗ್ಯಾರಂಟಿ ಹೊರತಾಗಿಯೂ ಐದು ಕ್ಷೇತ್ರಗಳಲ್ಲಿ ಸಾಧನೆ

​ಪ್ರಜಾವಾಣಿ ವಾರ್ತೆ
Published 18 ಮೇ 2025, 20:23 IST
Last Updated 18 ಮೇ 2025, 20:23 IST
<div class="paragraphs"><p>ಹೊಸಪೇಟೆಯಲ್ಲಿ ಭಾನುವಾರ ಸಮರ್ಪಣಾ ಸಂಕಲ್ಪ ಸಮಾವೇಶದ ಸಿದ್ಧತೆಯನ್ನು ಭಾನುವಾರ ಸಚಿವರಾದ ಜಮೀರ್‌ ಅಹಮದ್ ಖಾನ್‌, ಕೃಷ್ಣ ಬೈರೇಗೌಡ, ಶಾಸಕ ಎಚ್‌.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಪರಿಶೀಲಿಸಿದರು.</p></div>

ಹೊಸಪೇಟೆಯಲ್ಲಿ ಭಾನುವಾರ ಸಮರ್ಪಣಾ ಸಂಕಲ್ಪ ಸಮಾವೇಶದ ಸಿದ್ಧತೆಯನ್ನು ಭಾನುವಾರ ಸಚಿವರಾದ ಜಮೀರ್‌ ಅಹಮದ್ ಖಾನ್‌, ಕೃಷ್ಣ ಬೈರೇಗೌಡ, ಶಾಸಕ ಎಚ್‌.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಪರಿಶೀಲಿಸಿದರು.

   

–ಪ್ರಜಾವಾಣಿ ಚಿತ್ರ

ಹೊಸಪೇಟೆ (ವಿಜಯನಗರ): ‘ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಗ್ಯಾರಂಟಿ ಹೊರತುಪಡಿಸಿ ಇದು ರಾಜ್ಯ ಸರ್ಕಾರದ ಬಹುದೊಡ್ಡ ಜನಪರ ಕೆಲಸ’ ಎಂದು ಕೆಪಿಸಿಸಿ ವಕ್ತಾರ ಕಶ್ಯಪ್‌ ನಂದನ್ ಹೇಳಿದರು.

ADVERTISEMENT

ಸಮರ್ಪಣಾ ಸಂಕಲ್ಪ ಸಮಾವೇಶದ ಸಿದ್ಧತೆ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹಟ್ಟಿ, ತಾಂಡಾ, ಕೇರಿಗಳಲ್ಲಿ ಹತ್ತಾರು ವರ್ಷಗಳಿಂದ ನೆಲೆಸಿದವರಿಗೆ ಸೂಕ್ತ ದಾಖಲೆ ಇರಲಿಲ್ಲ. ಅದನ್ನು ನೀಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ. ಅದಕ್ಕೆ ಫಲಾನುಭವಿಗಳನ್ನು ಹೊಸಪೇಟೆಗೆ ಕರೆಸಿ ಹಕ್ಕುಪತ್ರ ನೀಡಲಾಗುತ್ತಿದೆ’ ಎಂದರು.

‘ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೊಳಿಸಿ, ಕಾಂಗ್ರೆಸ್ ತನ್ನ ಮಾತು ಉಳಿಸಿಕೊಂಡಿದೆ. ಬಂಡವಾಳ ಆಕರ್ಷಣೆ, ಉದ್ಯೋಗ ಸೃಷ್ಟಿ, ಗ್ರಾಮೀಣ ರಸ್ತೆ ಅಭಿವೃದ್ಧಿ, ವಿವಿಧ ಇಲಾಖೆಗಳಿಗೆ ನೇಮಕಾತಿ ಹಾಗೂ ದೊಡ್ಡಬಳ್ಳಾಪುರದಲ್ಲಿ ಅವಳಿ ನಗರ ನಿರ್ಮಾಣ ಸರ್ಕಾರದ ಬಹುದೊಡ್ಡ ಸಾಧನೆಗಳು’ ಎಂದರು.

‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ₹500 ಕೋಟಿವರೆಗೆ ಅನುದಾನ ನೀಡಲಾಗಿದೆ. ಗ್ಯಾರಂಟಿ ಕೊಟ್ಟೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂಬ ಸ್ಪಷ್ಟ ಸಂದೇಶ ರಾಜ್ಯ ಸರ್ಕಾರ ರವಾನಿಸಿದೆ. ಆದರೆ, ರಾಜ್ಯವನ್ನು ಅನುಸರಿಸಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದ ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಹಣ ನೀಡುವ ಯೋಜನೆ ಒಂದೇ ತಿಂಗಳಿಗೆ ಕೊನೆಗೊಂಡಿದೆ’ ಎಂದು ಅವರು ಟೀಕಿಸಿದರು.

ಅಂತಿಮ ಹಂತದ ಸಿದ್ಧತೆ: ಶಾಮಿಯಾನ, ವೇದಿಕೆ ನಿರ್ಮಾಣ ಸೇರಿ ಇತರ ಕಾರ್ಯಗಳು ಅಂತಿಮ ಹಂತಕ್ಕೆ ತಲುಪಿವೆ. ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್‌, ಶಾಸಕ ಎಚ್‌.ಆರ್.ಗವಿಯಪ್ಪ,  ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್‌ ಮತ್ತು ಅಧಿಕಾರಿಗಳು ಭಾನುವಾರದ ಸಿದ್ಧತೆ ಪರಿಶೀಲಿಸಿದರು.

ಕೇಂದ್ರ ಸರ್ಕಾರವು ರಾಜ್ಯದ ಪಾಲಿನ ತೆರಿಗೆ ಅನುದಾನ ಬಾಕಿ ಉಳಿಸಿಕೊಂಡು ಸತಾಯಿಸುತ್ತಿದೆ. ಅದಕ್ಕೆ ರಾಜ್ಯದಲ್ಲಿ ಕೆಲ ವಸ್ತುಗಳ ಬೆಲೆ ಏರಿಕೆ ಆಗಿದೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು
– ಕಶ್ಯಪ್‌ ನಂದನ್‌, ವಕ್ತಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.