ADVERTISEMENT

ಹೊಸಪೇಟೆ: ಪ್ರಿ ಪೇಯ್ಡ್ ಮೀಟರ್‌ನಿಂದ ಅಪಾಯ ನಿಶ್ಚಿತ: ವೀರಸಂಗಯ್ಯ

ಫೆ.23ಕ್ಕೆ ರೈತರ ಸಭೆ, ತುಂಗಭದ್ರಾ ಅಣೆಕಟ್ಟೆಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 10:49 IST
Last Updated 21 ಫೆಬ್ರುವರಿ 2026, 10:49 IST
<div class="paragraphs"><p>ಪುಸ್ತಕ&nbsp;ಬಿಡುಗಡೆ</p></div>

ಪುಸ್ತಕ ಬಿಡುಗಡೆ

   

ಹೊಸಪೇಟೆ (ವಿಜಯನಗರ): ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಫೆ.23ರಂದು ರೈತರ ಸಭೆ ನಡೆಯಲಿದ್ದು, ತುಂಗಭದ್ರಾ ಅಣೆಕಟ್ಟೆಗೆ ತೆರಳಿ ಗೇಟ್ ಅಳವಡಿಕೆ ಕಾಮಗಾರಿ ಪರಿಶೀಲಿಸಲಾಗುವುದು. ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ಒಕ್ಕೊರಲಿನಿಂದ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸಲಾಗುವುದು ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಹೇಳಿದರು.

ತಾವು ಸಂಪಾದಿಸಿದ ‘ಪ್ರಿ ಪೇಯ್ಡ್‌ ಮೀಟರ್ ಬಂತು, ರೈತರಿಗೆ ಆಪತ್ತು ತಂತು...’ ಪುಸ್ತಕವನ್ನು ಶನಿವಾರ ಇಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ತುಂಗಭದ್ರಾ ಕ್ರೆಸ್ಟ್‌ಗೇಟ್‌ಗಳ ಅಳವಡಿಕೆ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂದು ಸ್ವತಃ ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರೇ ಹೇಳಿದ್ದಾರೆ, ಹೀಗಾಗಿ ರೈತರಿಗೆ ಆತಂಕ ಇದೆ, ಖುದ್ದಾಗಿ ಕಾಮಗಾರಿ ಪರಿಶೀಲಿಸಲು ರೈತರು ತೀರ್ಮಾನಿಸಿದ್ದಾರೆ, ಅಲ್ಲಿ ಲೋಪ ಕಂಡುಬಂದರೆ ಅದನ್ನು ನಾಡಿಗೆ ತಿಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದರು.

ADVERTISEMENT

ರೈತರ ಸಭೆಯಲ್ಲಿ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್‌ ಸಹಿತ ಹಲವು ಜಿಲ್ಲೆಗಳ ಮುಖಂಡರು ಪಾಲ್ಗೊಳ್ಳುವರು. ಪ್ರಿಪೇಯ್ಡ್‌ ಮೀಟರ್‌ನಿಂದ ರೈತರಿಗೆ, ಜನಸಾಮಾನ್ಯರಿಗೆ ಎದುರಾಗುವ ಕಷ್ಟಗಳ ಕುರಿತು ಚರ್ಚೆ ನಡೆಯಲಿದೆ ಎಂದು ವೀರಸಂಗಯ್ಯ ಹೇಳಿದರು.

ಪ್ರಚಾರಕ್ಕಷ್ಟೇ ಪಟ್ಟಾ: ರೈತರಿಗೆ ಪಟ್ಟಾ ನೀಡುವುದಾಗಿ ಸರ್ಕಾರ ಹೇಳಿ ಪ್ರಚಾರ ಪಡೆದುಕೊಳ್ಳುತ್ತಿದೆ, ಆದರೆ ವಾಸ್ತವದಲ್ಲಿ ಪಟ್ಟಾ ಸಿಗದಂತೆ ಮಾಡಲು ಹಲವು ಷರತ್ತುಗಳನ್ನು ವಿಧಿಸಲಾಗಿದೆ. ‘ನಮ್ಮ ಹೊಲ ನಮ್ಮ ದಾರಿ’ ವಿಷಯದಲ್ಲೂ ದಾರಿ ಸಿಗಲು ಮ್ಯಾಪ್‌ ಕಡ್ಡಾಯಗೊಳಿಸಲಾಗಿದೆ. ಇದರಿಂದ ದಾರಿ ಸಿಗಲು ಸಾಧ್ಯವೇ ಇಲ್ಲದ ಸ್ಥಿತಿ ಇದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ 45 ಲಕ್ಷ ಪಂಪ್‌ಸೆಟ್‌ಗಳಿದ್ದು, ಇದುವರೆಗೆ 10 ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ನೀರಾವರಿ ಪಂಪ್‌ಗಳಿಗೆ ವಿದ್ಯುತ್ ಸಬ್ಸಿಡಿ ಇತ್ತು. ಇನ್ನು ಮುಂದೆ ಅದೆಲ್ಲ ಇರುವುದಿಲ್ಲ. ನೂತನ ವಿದ್ಯುತ್ ನೀತಿಯನ್ನು ಕೇರಳ ಸರ್ಕಾರ ಮಾತ್ರ ಅಧಿಕೃತವಾಗಿ ವಿರೋಧಿಸಿದೆ. ರಾಜ್ಯದಲ್ಲಿ ಮೂರು ತಿಂಗಳಿಂದ ಕಾಯ್ದೆ ಜಾರಿಗೆ ತರುವ ಪ್ರಯತ್ನ ನಡೆದಿದೆ. ರೈತರು, ಜನಸಾಮಾನ್ಯರು ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಬಹಳ ದೊಡ್ಡ ಅಪಾಯ ನಿಶ್ಚಿತ ಎಂದು ಎಚ್ಚರಿಸಿದ ವೀರಸಂಗಯ್ಯ, ತಾವು ಸಂಪಾದಿಸಿರುವ ಪುಸ್ತಕವನ್ನು 45 ಲಕ್ಷ ರೈತ ಕುಟುಂಬಗಳಿಗೂ ತಲುಪಿಸಲಾಗುವುದು ಎಂದರು.

ವಿವಿಧ ಕ್ಷೇತ್ರಗಳ ಮುಖಂಡರಾದ ಪೀರ್‌ಪಾಷಾ, ಬಣ್ಣದಮನೆ ಸೋಮಶೇಖರ್‌, ವಿಶಾಲ ಮ್ಯಾಸರ, ಜಂಬುನಾಥ, ಗಂಟೆ ಸೋಮಶೇಖರ್, ರವಿಕುಮಾರ್ ತಂಬ್ರಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.