ಕೂಡ್ಲಿಗಿ (ವಿಜಯನಗರ ಜಿಲ್ಲೆ): ಖಾಸಗಿ ಬಸ್ಸೊಂದು ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು ಎಂಟು ಜನ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ತಾಲ್ಲೂಕಿನ ಬಿಷ್ಣಹಳ್ಳಿ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಮನೋಜ್(28), ಸುರೇಶ್ (45) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.
ಮುದಗಲ್‍ನಿಂದ ಬೆಂಗಳೂರಿಗೆ ಹೊರಟಿದ್ದ ಸುಗಮ ಸಂಸ್ಥೆಗೆ ಸೇರಿದ ಬಸ್‌ನ ಚಾಲಕ, ಬಿಷ್ಣಹಳ್ಳಿ ಬಳಿ ಬಂದಾಗ ಲಾರಿಯನ್ನು ಹಿಂದಿಕ್ಕಲು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಮತ್ತೊಂದು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬಸ್ಸಿನಲ್ಲಿದ್ದ ಇಬ್ಬರು ಮೃತಪಟ್ಟು, ಇತರ ಎಂಟು ಮಂದಿ ಗಾಯಗೊಂಡರು. ಗಾಯಗೊಂಡವರನ್ನು ಸುನಿಲ್, ಬಾಬುಜಾನ್, ವಿಶ್ವೇಶ, ಹನುಮನಗೌಡ, ಮಂಜುನಾಥ, ಆರುಣ್, ಸೈಯಾದ್ ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಹೆಸರು ತಿಳಿದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಬಸ್ ಮುಂಭಾಗ ಹಾಗೂ ಲಾರಿಯ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್., ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಕೊಟ್ಟೂರು ಸಿಪಿಐ ದುರುಗಪ್ಪ, ಕಾನಹೊಸಹಳ್ಳಿ ಪಿಎಸೈ ಸಿದ್ದರಾಮ ಬಿದರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಸ್ ಚಾಲಕ ವಿರುದ್ದ ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.