ADVERTISEMENT

ಹೊಸಪೇಟೆ: ಸದಾಶಿವ ಆಯೋಗದ ವರದಿ ವಿರೋಧಿಸಿ ಪ್ರತಿಭಟನೆ, ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 9:43 IST
Last Updated 7 ಅಕ್ಟೋಬರ್ 2021, 9:43 IST
ಎ.ಜೆ.ಸದಾಶಿವ ಆಯೋಗದ ವರದಿ ವಿರುದ್ಧ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದವರು ಪ್ರತಿಭಟನಾ ರ್‍ಯಾಲಿ ನಡೆಸಿದರು.
ಎ.ಜೆ.ಸದಾಶಿವ ಆಯೋಗದ ವರದಿ ವಿರುದ್ಧ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದವರು ಪ್ರತಿಭಟನಾ ರ್‍ಯಾಲಿ ನಡೆಸಿದರು.   

ಹೊಸಪೇಟೆ(ವಿಜಯನಗರ): ಎ.ಜೆ.ಸದಾಶಿವ ಆಯೋಗದ ವರದಿ ವಿರುದ್ಧ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದವರು ಗುರುವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಸದಾಶಿವ ಆಯೋಗದ ವರದಿ ಏಕಪಕ್ಷೀಯವಾಗಿದೆ. ಅದರ ಶಿಫಾರಸು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಕೆಲವು ಸಮುದಾಯಗಳ ಸಾಂವಿಧಾನಿಕ ಮೀಸಲಾತಿ ಹಕ್ಕು ವಂಚಿಸಲು ಕೆಲ ರಾಜಕಾರಣಿಗಳು ಹವಣಿಸುತ್ತಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಎಡ-ಬಲ, ಸ್ಪೃಶ್ಯ-ಅಸ್ಪೃಶ್ಯ ಶಬ್ದಗಳನ್ನು ಬಳಸಿ ಜಾತಿಗಳ ನಡುವೆ ಕಂದಕವನ್ನು ಸೃಷ್ಟಿಸುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ಎ.ಜೆ.ಸದಾಶಿವ ಆಯೋಗದ ಕೆಲ ಅಂಕಿ ಅಂಶಗಳು ಬಂಜಾರ, ಭೋವಿ, ಕೊರಮ, ಕೊರಚ, ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳನ್ನು ವರ್ಗೀಕರಿಸಿರುವ ವಿಧಾನ ಮತ್ತು ಬಳಸಿರುವ ಮಾನದಂಡಗಳು, ಈ ಸಮುದಾಯಗಳ ಕುರಿತ ವ್ಯಾಖ್ಯಾನ, ಸ್ಥಿತಿಗತಿಗಳ ದಾಖಲೀಕರಣ ಅಂಶಗಳು ಅಸಾಂವಿಧಾನಿಕವಾಗಿವೆ ಎಂದು ಮನವಿಯಲ್ಲಿ ದೂರಿದರು.

ಮುಖಂಡ ಡಿ.ವೆಂಕಟರಮಣ ಮಾತನಾಡಿ, ‘ಎ.ಜೆ.ಸದಾಶಿವ ಅವರ ತಂಡ ಪರಿಶಿಷ್ಟ ಜಾತಿಯ ವಸ್ತುಸ್ಥಿತಿ ಅಧ್ಯಯನ ಮಾಡಿ ವರದಿ ನೀಡುತ್ತೇವೆ ಎಂದು ಹೇಳಿತ್ತು. ಆದರೆ, ವಾಸ್ತವದಲ್ಲಿ ಯಾವ ಜಿಲ್ಲೆಗೂ ಭೇಟಿ ನೀಡಿಲ್ಲ. ಎಡ-ಬಲ ಸ್ಪೃಶ್ಯ-ಅಸ್ಪೃಶ್ಯ ಎಂದು ವಿಂಗಡಿಸಿದೆ. ಅಂಬೇಡ್ಕರ್ ಅವರು ಎಲ್ಲಿಯೂ ಈ ಪದಗಳನ್ನು ಬಳಸಿಲ್ಲ. ಈ ರೀತಿಯಾಗಿ ವರ್ಗೀಕರಿಸಿ ಪರಿಶಿಷ್ಟರನ್ನು ವಿಂಗಡಿಸುವ ಹುನ್ನಾರ ನಡೆದಿದೆ’ ಎಂದು ಟೀಕಿಸಿದರು.

ಒಕ್ಕೂಟದ ಮುಖಂಡರಾದ ವಿ.ತಿಪ್ಪೆಸ್ವಾಮಿ, ರಾಮಜೀ ನಾಯ್ಕ, ಹುಲುಗಪ್ಪ, ಬಸವರಾಜ್, ವಿ.ಮಹೇಶ್, ಚಿದಾನಂದ, ಗಾಳೆಪ್ಪ, ರಾಮಕೃಷ್ಣ, ರಮೇಶ್ ಇದ್ದರು.

ಪೊಲೀಸರ ಜೊತೆ ಮಾತಿನ ಚಕಮಕಿ: ಮಹಾತ್ಮ ಗಾಂಧಿ ವೃತ್ತದಿಂದ ನಗರದ ತಹಶೀಲ್ದಾರ್‌ ಕಚೇರಿ ವರೆಗೆ ರ್‍ಯಾಲಿ ನಡೆಸಿದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದವರು, ಅಲ್ಲಿದ್ದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆತಡೆಗೆ ಮುಂದಾದರು. ಅದಕ್ಕೆ ಪೊಲೀಸರು ಅವಕಾಶ ಕಲ್ಪಿಸಲಿಲ್ಲ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ತಹಶೀಲ್ದಾರ್‌ ಕಚೇರಿ ಎದುರು ಜಮಾಯಿಸಿ, ಮುಖಂಡರು ಮಾತನಾಡಿದರು.

ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT