ADVERTISEMENT

ಹೊಸಪೇಟೆ: ದೇವದಾಸಿ ಮಹಿಳೆಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 13:48 IST
Last Updated 15 ಜೂನ್ 2023, 13:48 IST
ಹೊಸಪೇಟೆಯ ತಾಲ್ಲೂಕು ಕಚೇರಿ ಮುಂಭಾಗ ದೇವದಾಸಿ ಮಹಿಳೆಯರು ತಮ್ಮ ಹಕ್ಕೊತ್ತಾಯ ಈಡೇರಿಸಲು ಆಗ್ರಹಿಸಿ  ಗುರುವಾರ  ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ
ಹೊಸಪೇಟೆಯ ತಾಲ್ಲೂಕು ಕಚೇರಿ ಮುಂಭಾಗ ದೇವದಾಸಿ ಮಹಿಳೆಯರು ತಮ್ಮ ಹಕ್ಕೊತ್ತಾಯ ಈಡೇರಿಸಲು ಆಗ್ರಹಿಸಿ  ಗುರುವಾರ  ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನವನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು ಎಂಬ ಪ್ರಮುಖ ಬೇಡಿಕೆ ಸಹಿತ 19 ಹಕ್ಕೊತ್ತಾಯಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಹೊಸಪೇಟೆ ತಾಲ್ಲೂಕು ಸಮಿತಿ ವತಿಯಿಂದ ಗುರುವಾರ ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ದೇವದಾಸಿ ಮಹಿಳೆಯರ ಪರಿತ್ಯಕ್ತ ಹೆಣ್ಣುಮಕ್ಕಳಿಗೂ ಮಾಸಿಕ ಸಹಾಯಧನವನ್ನು ವಿಸ್ತರಿಸಬೇಕು, ಗಣತಿಯಲ್ಲಿ ಬಿಟ್ಟುಹೋದ ದೇವದಾಸಿ ಮಹಿಳೆಯರನ್ನು ಗಣತಿ ಪಟ್ಟಿಯಲ್ಲಿ ಸೇರಿಸಿ ಎಲ್ಲಾ ರೀತಿಯ ನೆರವು ಒದಗಿಸಬೇಕು, ಮಕ್ಕಳ ಮದುವೆಯ ವಿಚಾರದಲ್ಲಿ ಯಾವುದೇ ಷರತ್ತು ಇರಬಾರದು, ಅವರ ಮದುವೆಗೆ ₹5 ಲಕ್ಷ ಪ್ರೋತ್ಸಾಹಧನ ನೀಡಬೇಕು ಎಂಬ ಹಕ್ಕೊತ್ತಾಯವನ್ನೂ ಸರ್ಕಾರದ ಮುಂದಿಡಲಾಗಿದೆ.

ಸಂಘದ  ಅಧ್ಯಕ್ಷೆ ಕೆ.ನಾಗರತ್ನ ಮಾತನಾಡಿ, ಹಣದುಬ್ಬರ ಸಹಿತ ಹಲವಾರು ಸಂಕಷ್ಟಗಳಿಂದ ದೇವದಾಸಿ ಮಹಿಳೆಯರು ನಲುಗಿ ಹೋಗಿದ್ದು, ಅವರ ಮಾಸಿಕ ಸಹಾಯಧನವನ್ನು ₹5 ಸಾವಿರಕ್ಕೆ ಹೆಚ್ಚಿಸಲೇಬೇಕು ಎಂದರು.

ADVERTISEMENT

‘2017ರಿಂದ ಜನತಾ ಮನೆಗಳನ್ನು ನೀಡಿಲ್ಲ. ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿ ಕೊರೆಸಿಕೊಟ್ಟಿಲ್ಲ’ ಎಂದು ದೂರಿದ ಅವರು, ‘ಮಾಜಿ ದೇವದಾಸಿ ಮಹಿಳೆಯರು ಅಲ್ಲದೇ ಇರುವವರಿಗೆ ಪಿಂಚಣಿ ಮತ್ತು ಮನೆಗಳನ್ನು ಮಂಜೂರು ಮಾಡಿರುವ  ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು‘ ಎಂದು ಒತ್ತಾಯಿಸಿದರು.

ಸಂಘದ  ಕಾರ್ಯದರ್ಶಿ ಎಸ್.ಯಲ್ಲಮ್ಮ, ಖಜಾಂಚಿ ಹಂಪಮ್ಮ ಇದ್ದರು. ಸುಮಾರು 100 ಮಂದಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಬಳಿಕ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿಯನ್ನು ಕಳುಹಿಸಿಕೊಡಲಾಯಿತು. ಶಿರಸ್ತೇದಾರ್‌ ಶ್ರೀಧರ್‌ ಅವರು ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.