ADVERTISEMENT

ಸರ್ಕಾರದ ಆದೇಶ ಮೀರಿ ಬೋಧನಾ ಶುಲ್ಕ ವಸೂಲಿ ಆರೋಪ, ಜನಪರ ವೇದಿಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 6:35 IST
Last Updated 15 ಮಾರ್ಚ್ 2021, 6:35 IST
 ಜನಪರ ವೇದಿಕೆಯ ಕಾರ್ಯಕರ್ತರು ಸೋಮವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜನಪರ ವೇದಿಕೆಯ ಕಾರ್ಯಕರ್ತರು ಸೋಮವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

ವಿಜಯನಗರ (ಹೊಸಪೇಟೆ): ಸರ್ಕಾರದ ಆದೇಶ ಮೀರಿ ನಗರದಲ್ಲಿ ಶಿಕ್ಷಣ ಸಂಸ್ಥೆಗಳು ಬೋಧನಾ ಶುಲ್ಕ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿ ಜನಪರ ವೇದಿಕೆಯ ಕಾರ್ಯಕರ್ತರು ಸೋಮವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇತ್ತೀಚೆಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಖಾಸಗಿ ಶಾಲೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಶೇ 70ರಷ್ಟು ಬೋಧನಾ ಶುಲ್ಕ ತೆಗೆದುಕೊಳ್ಳಲು ತಿಳಿಸಿದ್ದಾರೆ. ಆದರೆ, ನಗರದಲ್ಲಿ ಬಹುತೇಕ ಖಾಸಗಿ ಶಾಲೆಗಳವರು ನೂರಕ್ಕೆ ನೂರರಷ್ಟು ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ ಎಂದು ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರದಲ್ಲಿ ಆರೋಪಿಸಿದರು.

ಕೋವಿಡ್‌ನಿಂದ ಎಲ್ಲೆಡೆ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷದಿಂದ ಕೆಲಸವಿಲ್ಲದೆ ಈಗಲೂ ಅನೇಕ ಜನ ಮನೆಯಲ್ಲಿ ಕುಳಿತಿದ್ದಾರೆ. ಸಾಲ ಮಾಡಿ ಮಕ್ಕಳಿಗೆ ಶಾಲೆಗೆ ಕಳಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪೂರ್ಣ ಶುಲ್ಕ ಪಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ. ಸರ್ಕಾರದ ಆದೇಶ ಕೇವಲ ಬಾಯಿಮಾತಿಗೆ ಸೀಮಿತವಾಯಿತೇ ಎಂದು ಪ್ರಶ್ನಿಸಿದರು.

ADVERTISEMENT

ವೇದಿಕೆಯ ಅಧ್ಯಕ್ಷ ಡಿ. ವೆಂಕಟರಮಣ, ಗೌರವ ಅಧ್ಯಕ್ಷ ಜಿ.ವಿ. ರಮೇಶ್‌, ಉಪಾಧ್ಯಕ್ಷ ಸಿ. ಕೃಷ್ಣ, ನಿಜಾಮುದ್ದೀನ್‌, ಸಂಘಟನಾ ಕಾರ್ಯದರ್ಶಿ. ವೈ. ಚಂದ್ರಬಾಬು, ಕಾರ್ಯದರ್ಶಿ ಚನ್ನಕೇಶವ ಕಿಚಿಡಿ, ಅಲ್ಲಾಭಕ್ಷಿ, ಯು. ನೀಲಕಂಠ, ಎಸ್‌. ರವಿ, ಜೆ. ರಮೇಶ, ಕೆ. ಅಶೋಕ, ಹುಚ್ಚಪ್ಪ ಕರಡಿ, ಎಸ್‌. ಕೋದಂಡಪಾಣಿ, ಕೆ. ತಾಯಪ್ಪ, ಎಸ್‌. ಮುನಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.