ADVERTISEMENT

ಹೊಸಪೇಟೆ: ನಸುಕಿನ ಜಾವ 'ಜೇಮ್ಸ್' ವೀಕ್ಷಿಸಿದ ಪುನೀತ್ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 4:08 IST
Last Updated 17 ಮಾರ್ಚ್ 2022, 4:08 IST
   

ಹೊಸಪೇಟೆ (ವಿಜಯನಗರ): ನಗರದ ನಾಲ್ಕು ಚಿತ್ರಮಂದಿರಗಳಲ್ಲಿ ಗುರುವಾರ ನಸುಕಿನ ಜಾವ ನಾಲ್ಕೂವರೆ ಗಂಟೆಗೆ ಪುನೀತ್ ರಾಜಕುಮಾರ್ ನಟನೆಯ 'ಜೇಮ್ಸ್' ಚಿತ್ರ ಪ್ರದರ್ಶನಗೊಂಡಿತು.

ಭಾರಿ ಸಂಖ್ಯೆಯಲ್ಲಿ ಜನ ಬಂದದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಬಾಲ ಚಿತ್ರ ಮಂದಿರದಲ್ಲಿ ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಲಾಠಿ ಬೀಸಿದರು.

ನೂಕುನುಗ್ಗಲಿನಲ್ಲಿ ಹಲವರು ಸಿನಿಮಾ ಟಿಕೆಟ್ ಗಿಟ್ಟಿಸಿಕೊಂಡು ಕೆಲವರು ಸಂಭ್ರಮಿಸಿದರೆ, ಟಿಕೆಟ್ ಸಿಗದೇ ಹಲವರು ನಿರಾಸೆಯಿಂದ ಹಿಂತಿರುಗಿದರು.

ADVERTISEMENT

ಬುಧವಾರ ಸಂಜೆ ನಗರದ ವಿವಿಧ ಬಡಾವಣೆಗಳಿಂದ ಪುನೀತ್ ಅಭಿಮಾನಿಗಳು ಅವರ ಫ್ಲೆಕ್ಸ್ ನೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಚಿತ್ರಮಂದಿರಗಳತ್ತ ತೆರಳಿ ಅಲ್ಲಿ ಫ್ಲೆಕ್ಸ್ ಕಟ್ಟಿದರು. ಮಧ್ಯರಾತ್ರಿ ಕೇಕ್ ಕತ್ತರಿಸಿ, ಪುನೀತ್ ಅಮರವಾಗಲಿ ಎಂದು ಘೋಷಣೆ ಕೂಗಿದರು. ಪಟಾಕಿ ಸಿಡಿಸಿದರು. ನಸುಕಿನ ಜಾವದ ವರೆಗೂ ಚಿತ್ರಮಂದಿರದ ಬಳಿ ಹಲವರು ಜಾಗರಣೆ ಮಾಡಿದರು. ಕೆಲವರು ನಿದ್ರೆಗೆ ಜಾರಿದ್ದರು. ಟಿಕೆಟ್ ಕೌಂಟರ್ ಆರಂಭವಾಗುತ್ತಿದ್ದಂತೆ ಶಿಳ್ಳೆ, ಕೇಕೆ ಹೊಡೆದರು. ನೂಕು ನುಗ್ಗಲಿನಲ್ಲಿ ಹರಸಾಹಸ ಮಾಡಿ ಟಿಕೆಟ್ ಪಡೆದರು. ಎಲ್ಲ ಚಿತ್ರಮಂದಿರಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.