ADVERTISEMENT

PV Web Exclusive | ವಿಜಯನಗರ: ಜಿಲ್ಲಾಡಳಿತ ಭವನಕ್ಕೆ ದಾರಿ ದೂರ

ಇನ್ನೂ ಗೃಹ ಮಂಡಳಿ ಅಧೀನದಲ್ಲೇ ಇದೆ ಟಿಎಸ್‌ಪಿ ಜಾಗ; ಠೇವಣಿದಾರರು ಅತಂತ್ರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 23 ಫೆಬ್ರುವರಿ 2021, 13:20 IST
Last Updated 23 ಫೆಬ್ರುವರಿ 2021, 13:20 IST
ಜಿಲ್ಲಾಧಿಕಾರಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸಲು ಸಿದ್ಧವಾಗಿರುವ ಹೊಸಪೇಟೆಯ ಟಿಎಸ್‌ಪಿಗೆ ಸೇರಿದ ಕಚೇರಿ
ಜಿಲ್ಲಾಧಿಕಾರಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸಲು ಸಿದ್ಧವಾಗಿರುವ ಹೊಸಪೇಟೆಯ ಟಿಎಸ್‌ಪಿಗೆ ಸೇರಿದ ಕಚೇರಿ   

ವಿಜಯನಗರ (ಹೊಸಪೇಟೆ): ನಗರದ ತುಂಗಭದ್ರಾ ಸ್ಟೀಲ್‌ ಪ್ರಾಡಕ್ಟ್ಸ್‌ನಿಂದ (ಟಿಎಸ್‌ಪಿ) ಕರ್ನಾಟಕ ಗೃಹ ನಿರ್ಮಾಣ ಮಂಡಳಿಗೆ ಕೇಂದ್ರ ಸರ್ಕಾರದಿಂದ ಹಸ್ತಾಂತರಗೊಂಡಿರುವ ಜಮೀನು ಇನ್ನೂ ಅದರ ಅಧೀನದಲ್ಲೇ ಇರುವುದರಿಂದ ಜಿಲ್ಲಾಡಳಿತ ಭವನ ನಿರ್ಮಾಣದ ಯೋಜನೆ ಇನ್ನಷ್ಟು ವಿಳಂಬಗೊಳ್ಳುವ ಸಾಧ್ಯತೆ ಇದೆ.

‘ಗೃಹ ಮಂಡಳಿಗೆ ಸೇರಿದ ಟಿಎಸ್‌ಪಿ ಜಾಗ ಕಂದಾಯ ಇಲಾಖೆಗೆ ಹಸ್ತಾಂತರಿಸಲು ಸರ್ಕಾರ ಸೂಚಿಸಿದೆ’ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಅವರು ಇತ್ತೀಚೆಗೆ ತಿಳಿಸಿದ್ದರು. ಅದರ ಬೆನ್ನಲ್ಲೇ ಟಿಎಸ್‌ಪಿಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅದರ ಹಳೆಯ ಕಟ್ಟಡದಲ್ಲೇ ತಾತ್ಕಾಲಿಕವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಆರಂಭಿಸಲಾಗುವುದು ಎಂದೂ ಹೇಳಿದ್ದರು.

ಹೀಗೆ ಹೇಳಿ ಹಲವು ದಿನಗಳೇ ಕಳೆದಿವೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಗತಿಯಾಗಿಲ್ಲ. ಕಂದಾಯ ಇಲಾಖೆಯ ಜಮೀನು ಹಸ್ತಾಂತರಿಸುವ ಕುರಿತು ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.

ADVERTISEMENT

ಠೇವಣಿದಾರರು ಅತಂತ್ರ:

ಕೇಂದ್ರ ಸರ್ಕಾರವು ಟಿ.ಎಸ್‌.ಪಿ. ಮುಚ್ಚಿದ ನಂತರ, 2017ರಲ್ಲಿ ₹55.22 ಕೋಟಿಗೆ 82.37 ಎಕರೆ ಜಾಗವನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿಗೆ ಪರಭಾರೆ ಮಾಡಿತು. ಅಲ್ಲಿ ಮಂಡಳಿಯು ಲೇಔಟ್‌ ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಲು ತೀರ್ಮಾನಿಸಿತು. ಈ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ಸಹ ನೀಡಿತು. ಮಂಡಳಿ ಪ್ರಕಾರ, 974 ಜನ ನಿವೇಶನಕ್ಕಾಗಿ ಮುಂಗಡವಾಣಿ ಠೇವಣಿ ಕಟ್ಟಿದ್ದಾರೆ.

ಸ್ವಂತ ನಿವೇಶನ ಹೊಂದಬೇಕೆಂಬ ಆಸೆಗಣ್ಣಿನಿಂದ ಠೇವಣಿ ಕಟ್ಟಿದವರು ಈಗ ಅತಂತ್ರರಾಗಿದ್ದಾರೆ. ‘ಈ ಮೊದಲು ನಿವೇಶನಗಳನ್ನು ನಿರ್ಮಿಸಲಾಗುತ್ತದೆ ಎಂದು ಠೇವಣಿ ಪಡೆದಿದ್ದಾರೆ. ಈಗ ಅಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕಾಗಿ ಅದನ್ನು ತಡೆಯಲಾಗಿದೆ. ಈ ರೀತಿ ಮಾಡುವುದರಿಂದ ಅನೇಕರಿಗೆ ತೊಂದರೆಯಾಗುತ್ತದೆ. ಈಗ ನಗರ ಜಿಲ್ಲಾ ಕೇಂದ್ರ ಆಗಿರುವುದರಿಂದ ನಿವೇಶನಗಳ ಬೆಲೆ ಆಕಾಶಕ್ಕೆ ಏರಿದೆ. ಮಧ್ಯಮ ವರ್ಗದವರಿಗೆ ಖರೀದಿಸಲು ಆಗುತ್ತದೆಯೇ’ ಎಂದು ಠೇವಣಿ ಕಟ್ಟಿರುವ ರಮೇಶ ಅಸಹಾಯಕತೆಯಿಂದ ಪ್ರಶ್ನಿಸಿದರು.

‘ಠೇವಣಿ ಇಟ್ಟವರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಕಿಲ್ಲ. ಒಂದುವೇಳೆ ಕಂದಾಯ ಇಲಾಖೆಗೆ ಜಮೀನು ಹಸ್ತಾಂತರಗೊಂಡರೆ, ಠೇವಣಿದಾರರಿಗೆ ಬಡ್ಡಿ ಸಮೇತ ಅವರ ಹಣ ಹಿಂತಿರುಗಿಸಲಾಗುವುದು’ ಎಂದು ಗೃಹ ನಿರ್ಮಾಣ ಮಂಡಳಿಯ ಎಂಜಿನಿಯರ್‌ ಶಿವಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಟಿಎಸ್‌ಪಿ ಜಾಗದಲ್ಲೇಕೆ ಭವನ:

ಟಿಎಸ್‌ಪಿ ಜಾಗ ನಗರದ ಹೃದಯ ಭಾಗದಲ್ಲಿದೆ. ಸದ್ಯ ಇಷ್ಟೊಂದು ವಿಶಾಲ ಜಾಗ ನಗರದಲ್ಲಿ ಬೇರೆಲ್ಲೂ ಇಲ್ಲ. ನಗರದ ಹೊರಭಾಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಿದರೆ ಜನರಿಗೆ ಅನಾನುಕೂಲವಾಗುತ್ತದೆ. ಎಲ್ಲ ಕಚೇರಿಗಳು ಒಂದೇ ಕಡೆಯಿದ್ದರೆ ಅನ್ಯ ತಾಲ್ಲೂಕುಗಳಿಂದ ಬರುವವರಿಗೂ ಅನುಕೂಲವಾಗುತ್ತದೆ ಎಂದು ಭಾವಿಸಿ ಈ ಜಾಗ ಗುರುತಿಸಲಾಗಿದೆ. ವಿಜಯನಗರದ ವಾಸ್ತುಶಿಲ್ಪ ಮಾದರಿಯಲ್ಲಿ ಭವನ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದರ ನೀಲನಕಾಶೆ ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿದೆ.

ಈ ಸಂಬಂಧ ಸಚಿವ ಆನಂದ್‌ ಸಿಂಗ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.