ಹೊಸಪೇಟೆ: ಕೂಡ್ಲಿಗಿ ಸಮೀಪ ಖಾಸಗಿ ಗೋದಾಮಿನಲ್ಲಿ ಇಟ್ಟಿದ್ದ 130 ಟನ್‌ನಷ್ಟು ಪಡಿತರ ಅಕ್ಕಿಯನ್ನು ಕಳ್ಳಸಾಗಣೆ ಮಾಡಿರುವ ಶಂಕೆ ಇದೆ, ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಾಗರಾಜ್ ಅವರ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮತ್ತು ಎಸ್‌ಪಿ ಎಸ್.ಜಾಹ್ನವಿ ಅವರನ್ನು ಭೇಟಿ ಮಾಡಿದ ರೈತ ಮುಖಂಡರು, ಅಕ್ರಮದಲ್ಲಿ ಶಾಮೀಲಾಗಿರುವ ಪೊಲೀಸರ ಸಹಿತ ತಪ್ಪು ಎಸಗಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರದ ಅಕ್ಕಿಯನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಘಟನೆಯ ವಿವರ: ಕೂಡ್ಲಿಗಿ ಪಟ್ಟಣ ಸಮೀಪದ ಮರಬ್ಬ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಖಾಸಗಿ ಗೋದಾಮಿನಲ್ಲಿ ಸುಮಾರು 130 ಟನ್‌ನಷ್ಟು ಅಕ್ಕಿಯನ್ನು ಶೇಖರಿಸಿ ಇಡಲಾಗಿತ್ತು. ಸೆ.20ರ ರಾತ್ರಿ ಅದೇ ಗೋದಾಮಿನಿಂದ ಅಕ್ರಮವಾಗಿ ಒಂದು ದೊಡ್ಡ ಲಾರಿ ಮತ್ತು ಒಂದು ಟಾಟಾ ಏಸ್ ವಾಹನದಲ್ಲಿ ಅಕ್ಕಿ ಸಾಗಣೆ ಮಾಡಲಾಗುತ್ತಿರುವುದನ್ನು ಕಂಡಿದ್ದ ಸ್ಥಳೀಯ ರೈತರು ಎಚ್ಚರಿಕೆಯ ಸಂದೇಶ ನೀಡಿದ್ದರಿಂದ ಹೊಸಪೇಟೆಯಿಂದಲೇ ರೈತ ಮುಖಂಡರು ಸ್ಥಳಕ್ಕೆ ಧಾವಿಸಿದ್ದರು ಹಾಗೂ 112ಕ್ಕೆ ಕರೆ ಮಾಡಿ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದರು. ಆಗ ಆರೋಪಿಗಳು ವಾಹನಗಳನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದರು.
ಸ್ಥಳಕ್ಕೆ ಪೊಲೀಸರು ಬಂದುದನ್ನು ದೃಢಪಡಿಸಿಕೊಂಡ ಬಳಿಕ ಹಾಗೂ ಅಕ್ಕಿ ಅಕ್ರಮ ಸಾಗಣೆ ಆಗುತ್ತಿರುವುದನ್ನು ಮನವರಿಕೆ ಮಾಡಿಕೊಟ್ಟ ಬಳಿಕವಷ್ಟೇ ರೈತ ಮುಖಂಡರು ಮನೆಗೆ ತೆರಳಿದ್ದರು. ಆದರೆ ಸೋಮವಾರ ಅದೇ ಗೋದಾಮಿಗೆ ಬಂದು ನೋಡಿದಾಗ ಅಲ್ಲಿ ವಾಹನಗಳೂ ಇರಲಿಲ್ಲ, ಗೋದಾಮಿನೊಳಗೆ ಇದ್ದ ಅಕ್ಕಿ ಮೂಟೆಗಳೂ ನಾಪತ್ತೆಯಾಗಿದ್ದವು ಎಂಬುದನ್ನು ಮನವಿಯಲ್ಲಿ ವಿವರಿಸಲಾಗಿದೆ.
ಮನವಿ ಸಲ್ಲಿಕ ವೇಳೆ ರೈತ ಮುಖಂಡರಾದ ಸಣ್ಣಕ್ಕಿ ರುದ್ರಪ್ಪ, ಎಂ.ಜಡಿಯಪ್ಪ, ರೇವಣಸಿದ್ದಪ್ಪ, ಗಾಳೆಪ್ಪ, ಕೊಟ್ಟೂರು, ಬಸವರಾಜ್, ಕಿರಣ್, ಎಲ್.ನಾಗೇಶ್, ಮಾರುತಿ, ವಿ.ಗಾಳೆಪ್ಪ, ರಾಮಾಂಜಿನಿ, ಸತೀಶ ಇತರರು ಇದ್ದರು.
ಅಕ್ರಮ ಕಂಡ ತಕ್ಷಣ 112ಕ್ಕೆ ಕರೆ ಮಾಡಲಾಗಿತ್ತು ಸ್ಥಳಕ್ಕೆ ಪೊಲೀಸರು ಬಂದಿದ್ದರು ಎಂದ ರೈತರು ತಪ್ಪಿತಸ್ಥರನ್ನು ತಕ್ಷಣ ಹಿಡಿಯಿರಿ ಎಂದು ಪಟ್ಟು
ರೈತರು ನನಗೆ ಈ ವಿಷಯ ತಿಳಿಸಿರಲಿಲ್ಲ ವರದಿ ನೀಡುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಅಕ್ರಮ ಎಸಗಿದ್ದು ಸಾಬೀತಾದರೆ ಕ್ರಮನಿಶ್ಚಿತ ರಿಯಾಜ್ ಆಹಾರ ಇಲಾಖೆಯ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.