ADVERTISEMENT

2ಎ ಮೀಸಲಾತಿ ಹೋರಾಟ ತಾತ್ಕಾಲಿಕ ಸ್ಥಗಿತ: ವಿಜಯಾನಂದ ಕಾಶಪ್ಪನವರ

ಸರ್ಕಾರಕ್ಕೆ ಸೆ.15ರ ಗಡುವು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 10:49 IST
Last Updated 1 ಏಪ್ರಿಲ್ 2021, 10:49 IST
‘ಶರಣು ಶರಣಾರ್ಥಿ’ ಕಾರ್ಯಕ್ರಮದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಭಾಗವಹಿಸಿದ್ದರು.
‘ಶರಣು ಶರಣಾರ್ಥಿ’ ಕಾರ್ಯಕ್ರಮದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಭಾಗವಹಿಸಿದ್ದರು.    

ಹೊಸಪೇಟೆ(ವಿಜಯನಗರ): ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಕೊಟ್ಟ ಭರವಸೆಯಂತೆ ಆರು ತಿಂಗಳು 2ಎ ಮೀಸಲಾತಿ ಹೋರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸರ್ಕಾರಕ್ಕೆ ಸೆ.15ರ ವರೆಗೆ ಸಮಯ ನೀಡಿದ್ದು, ಅಷ್ಟರೊಳಗೆ ಮೀಸಲಾತಿ ಘೋಷಿಸದಿದ್ದರೆ ಪುನಃ ಹೋರಾಟ ಮುಂದುವರೆಸಲಾಗುವುದು’ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ತಿಳಿಸಿದರು.

2ಎ ಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಮಾಜದವರಿಗೆ ಅಭಿನಂದನೆ ಸಲ್ಲಿಸಲು ಹಮ್ಮಿಕೊಂಡಿರುವ ‘ಶರಣು ಶರಣಾರ್ಥಿ’ ಕಾರ್ಯಕ್ರಮದ ಭಾಗವಾಗಿ ಗುರುವಾರ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರೊಂದಿಗೆ ನಗರಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘64 ದಿನಗಳ ಸತತ ಹೋರಾಟದ ನಂತರ ಮುಖ್ಯಮಂತ್ರಿಯವರು ವರದಿ ಪಡೆದು, ಆರು ತಿಂಗಳೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಅವರ ಮಾತಿನಂತೆ ಸಮಾಜದವರು ಅಲ್ಲಿಯವರೆಗೆ ಕಾಯುತ್ತೇವೆ. ಆ ಗಡುವು ಮುಗಿದ ಬಳಿಕ ಪುನಃ ಹೋರಾಟ ಆರಂಭಿಸಲಾಗುವುದು’ ಎಂದು ಹೇಳಿದರು.

‘ಸಮುದಾಯದವರು ಸೆ.15ರ ವರೆಗೆ ಸಂಯಮದಿಂದ ಇರಬೇಕು. ಅಲ್ಲಿಯವರೆಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರತಿಯೊಂದು ಊರುಗಳಿಗೆ ಭೇಟಿ ನೀಡಿ ಸಮಾಜವನ್ನು ಇನ್ನಷ್ಟು ಸಂಘಟಿಸಲಾಗುವುದು’ ಎಂದರು.

‘ಸರ್ಕಾರ ಸಮಾಜಕ್ಕೆ 2ಎ ಮೀಸಲು ಘೋಷಿಸುತ್ತದೆ ಎನ್ನುವ ಭರವಸೆ ಇದೆ. ಒಂದುವೇಳೆ ಸರ್ಕಾರ ಮಾತಿನಿಂದ ಹಿಂದೆ ಸರಿದರೆ ಹೋರಾಟ ಮುಂದುವರೆಸಲಾಗುತ್ತದೆ. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಪಂಚಮಸಾಲಿ ಸಮಾಜದ ಮುಖಂಡರಾದ ಮಾವಿನಹಳ್ಳಿ ಬಸವರಾಜ, ವಿರೇಶ್, ಬಸವರಾಜ, ರವಿ ಕುಮಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.