ADVERTISEMENT

ಎಡಪಂಥೀಯರು, ಬಲಪಂಥೀಯರು ವಾಸ್ತವದ ಬಗ್ಗೆ ಮಾತಾಡುತ್ತಿಲ್ಲ:ಲೇಖಕ ಮಲ್ಹಾರಿ ದೀಕ್ಷಿತ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 8:23 IST
Last Updated 18 ಆಗಸ್ಟ್ 2022, 8:23 IST
   

ಹೊಸಪೇಟೆ (ವಿಜಯನಗರ): ‘ದೇಶದಲ್ಲಿ ಎಡಪಂಥೀಯರಾಗಲಿ ಅಥವಾ ಬಲಪಂಥೀಯರಾಗಲಿ ವಾಸ್ತವ ಸ್ಥಿತಿಗತಿಯ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲರೂ ಅವರವರ ಮೂಗಿನ ನೇರಕ್ಕೆ ಮಾತಾಡುತ್ತಿರುವುದು ದುರದೃಷ್ಟಕರ’ ಎಂದು ಲೇಖಕ ಮಲ್ಹಾರಿ ದೀಕ್ಷಿತ್‌ ಅಭಿಪ್ರಾಯಪಟ್ಟರು.

‘ನಾನು ಎಡನೂ ಅಲ್ಲ, ಬಲನೂ ಅಲ್ಲ. ನಾನು ಮಧ್ಯಮ ಪಂಥದವನೂ. ನನಗೆ ಏನು ಸರಿ ಅನಿಸುತ್ತದೆ. ಯಾವುದೇ ಸತ್ಯವಿದೆಯೋ ಅದನ್ನಷ್ಟೇ ಪ್ರತಿಪಾದಿಸುತ್ತೇನೆ. ನಾನು ಬರೆಯಲು ಆರಂಭಿಸಿದಾಗ ಎಡಪಂಥೀಯರೊಂದಿಗೆ ಗುರುತಿಸಿಕೊಂಡಿದ್ದೆ. ದಲಿತ, ಬಂಡಾಯ ಸಾಹಿತಿಗಳೊಂದಿಗೆ ಒಡನಾಟ ಹೊಂದಿದ್ದೆ. ನನ್ನ ಕೆಲವು ಮಿತ್ರರು ಬಲಪಂಥೀಯರಿದ್ದಾರೆ. ಆದರೆ, ಅವರೆಲ್ಲರೂ ಸತ್ಯ ಮರೆಮಾಚಿ, ಅವರ ಸಿದ್ಧಾಂತ ಪ್ರತಿಪಾದಿಸುತ್ತಿದ್ದರಿಂದ ಅವರಿಂದ ಅಂತರ ಕಾಯ್ದುಕೊಂಡೇ’ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾನು ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದೆ. ಬಳಿಕ ಅನೇಕರು ಹತ್ತಿರವಾದರು. ಆದರೆ, ಎಲ್ಲರ ವಿಚಾರಧಾರೆಗಳನ್ನು ಗೌರವಿಸುತ್ತ ನನ್ನ ಮಾರ್ಗದಲ್ಲಿ ಮುನ್ನಡೆದೆ. ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳ ಬಗ್ಗೆ ನನಗೆ ನಿರಾಸೆ ಮೂಡಿದೆ. ನಮ್ಮ ದೇಶದಲ್ಲಿ ಈಗಲೂ ಮಧ್ಯಮ ವರ್ಗ ಜಾಗೃತ ಅವಸ್ಥೆಯಲ್ಲಿದೆ. ಇಲ್ಲದಿದ್ದರೆ ನಮ್ಮ ದೇಶವೂ ಪಾಕಿಸ್ತಾನ, ಶ್ರೀಲಂಕಾದಂತೆ ದಿವಾಳಿಯಾಗುತ್ತಿತ್ತು ಎಂದರು.

ADVERTISEMENT

ನನ್ನ ‘ಸ್ಪಂದನ’ ಪ್ರಕಾಶನದಿಂದ ನಾನು ಬರೆದ ‘ಅನುಭೂತಿ’–ಲೇಖನಗಳ ಸಂಗ್ರಹ, ‘ಅರ್ಧ ರಾತ್ರಿಯಲ್ಲಿ’, ‘ಪ್ರಕ್ಷೇಪ’, ಹಾಗೂ ‘ಸಿಂಹಾಸನ’ ಕಥಾ ಸಂಕಲನ ಹಾಗೂ ‘ನಮ್ಮ ನಿಮ್ಮೊಳಗಿನವರು’ ಭಾಷಾಂತರ ಕೃತಿ ಬಿಡುಗಡೆ ಸಮಾರಂಭ ಆ. 21ರಂದು ಸಂಜೆ 6ಕ್ಕೆ ನಗರದ ರೋಟರಿ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಬಿಡುಗಡೆಗೊಳಿಸುವರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಸಿದ್ದು ಅಲಗೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಕಮಲಾ ದೀಕ್ಷಿತ್‌, ಸವಿತಾ ಯಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.