ಅರಸೀಕೆರೆ ಹೋಬಳಿಯ ಗೌಳೇರಹಟ್ಟಿ-ಪೋತಲಕಟ್ಟೆ ಹದಗೆಟ್ಟ ರಸ್ತೆಯಲ್ಲಿ ಬಸ್ ಹೋಗುತ್ತಿರುವುದು
ಅರಸೀಕೆರೆ (ವಿಜಯನಗರ ಜಿಲ್ಲೆ): ವಿಜಯನಗರ-ದಾವಣಗೆರೆ ಜಿಲ್ಲೆಗಳ ಗಡಿ ಭಾಗಗಳ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಅರೆ ಬಸಾಪುರ ಗ್ರಾಮದಿಂದ ದಾವಣಗೆರೆ - ಹರಪನಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಕಾಣಿಸುವುದಿಲ್ಲ. ಕೇವಲ ತಲೆ ಮಾತ್ರ ಮೇಲೆ ಕಾಣಿಸುವಂತಿದ್ದು ರಸ್ತೆಯ ಅವ್ಯವಸ್ಥೆಯ ಬಿಂಬಿಸುವಂತಿದೆ.
ಮಳೆಗಾಲದಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಮಳೆಗಾಲದಲ್ಲಿ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಇದರಿಂದ ಗುಂಡಿಗಳು ಕಾಣದೇ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗಳಾಗಿರುವ ಉದಾಹರಣೆ ಸಾಕಷ್ಟಿದೆ. ರಸ್ತೆ ಪಕ್ಕದಲ್ಲಿ ಕಿರು ಕಾಲುವೆಯೂ ಹಾದು ಹೋಗಿರುವುದು ಪ್ರಾಣ ಸಂಚಕಾರ ತಂದೊಡ್ಡುವ ಆತಂಕವೂ ಇದೆ.
ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಗ್ರಾಮ ಒಳಪಟ್ಟಿರುವುದರಿಂದ ರೈತರು ಮಾರುಕಟ್ಟೆಗೆ ಈ ದಾರಿಯನ್ನೇ ಅವಲಂಬಿಸಿದ್ದಾರೆ. ಆದರೆ, ವಾಹನ ಸರಾಗವಾಗಿ ಸಾಗದಿರುವುದರಿಂದ ಹಿರೇಮೆಗಳಗರೆಗೆ ಮೂಲಕ ಸಾಗುವ ಅನಿವಾರ್ಯತೆ ಇದೆ.
ಜಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಉಚ್ಚಂಗಿದುರ್ಗ ಮಾರ್ಗ ಮೂಲಕ ದಾವಣಗೆರೆ ಮಾರ್ಗದ ರಸ್ತೆಯ ಸ್ಥಿತಿ ಹೇಳತೀರದು. ಸಾರ್ವಜನಿಕರು ಸಂಚರಿಸುವ ರಸ್ತೆ ಅಧೋಗತಿಗೆ ತಲುಪಿದೆ.
ಬೇವಿನಹಳ್ಳಿ - ನಾಗತಿಕಟ್ಟೆ - ದಾವಣಗೆರೆ ರಸ್ತೆ ಕುರಿಗಳ ಹಿಂಡು ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗ ತಗ್ಗು ಕೆಸರು ಗದ್ದೆಯಂತಾಗಿ ಯಾರೂ ಓಡಾಡಲು ಸಾಧ್ಯವಾಗುವುದಿಲ್ಲ. ಕುರಿಗಳು ರಸ್ತೆ ಬಿಟ್ಟು ಬದಿಯಲ್ಲಿ ಸಾಗುತ್ತವೆ. ಬೈಕ್ ಸವಾರರು ಬದಿಯಲ್ಲಿ ಸಾಗಿ ಬಿದ್ದು ಅನಾಹುತಗಳು ಸಹ ನಡೆದಿವೆ.
ಗೌಳೀರಹಟ್ಟಿ - ಪೋತಲಕಟ್ಟೆ - ದಾವಣಗೆರೆ ಮಾರ್ಗದ ರಸ್ತೆ ಡಾಂಬರೀಕರಣಗೊಂಡು ಮೂರು ದಶಕಗಳ ಮೇಲಾಗಿದೆ. ಕನಿಷ್ಠ ದುರಸ್ತಿಗೊಂಡಿಲ್ಲ. ಬಸ್, ಲಾರಿ, ಟ್ರ್ಯಾಕ್ಟರ್ ಜಲ್ಲಿ, ಕಲ್ಲು ಸಾಗಾಣಿಕೆ ನಡೆಯುವುದರಿಂದ ರಸ್ತೆಗಳು ಗುಂಡಿ ಬಿದ್ದು ಮೃತ್ಯುಕೂಪವಾಗಿ ಮಾರ್ಪಟ್ಟಿವೆ.
ಗುಂಡಿಗಳಿದ್ದ ರಸ್ತೆಯಲ್ಲಿ ಬಸ್ ಸಾಗುತ್ತಿದ್ದರೆ, ಒಳಗಡೆ ಕುಳಿತ ಪ್ರಯಾಣಿಕರಿಗೆ ತೊಟ್ಟಿಲು ತೂಗುವ ಅನುಭವಾಗುತ್ತದೆ. ರಸ್ತೆಯಲ್ಲಿ ಸಂಚರಿಸುವ ಚಾಲಕರು ಹೈರಾಣರಾಗಿದ್ದಾರೆ. ದಾರಿಯಲ್ಲಿ ವಾಹನ ಕೆಟ್ಟು ನಿಂತು ಸಮಸ್ಯೆ ಅನುಭವಿಸುತ್ತಿದ್ದಾರೆ.
ಅರಸೀಕೆರೆ - ಉಚ್ಚಂಗಿದುರ್ಗ ಮಾರ್ಗವಾಗಿ ಹಾದು ಹೋಗಿರುವ ಗದಗ-ಮಂಡ್ಯ 47 ರಾಜ್ಯ ಹೆದ್ದಾರಿ ವಿಸ್ತರಣೆ ಮಾಡಲು ಒತ್ತಾಯ ಕೇಳಿ ಬಂದಿದೆ. ಈಗಾಗಲೇ ಅರಸೀಕೆರೆ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಅಪೂರ್ಣಗೊಂಡಿದೆ. ಉಚ್ಚಂಗಿದುರ್ಗ ಗ್ರಾಮದಲ್ಲಿ ವಿಸ್ತರಣೆ ನಿರೀಕ್ಷೆಯಲ್ಲಿ ಜನರಿದ್ದಾರೆ. ಕಾಮಗಾರಿ ಬಳಿಕ ಮನೆ, ಅಂಗಡಿ ಮುಂಗಟ್ಟುಗಳ ನಿರ್ಮಾಣದ ನಿರ್ಧಾರ ಕೈಗೊಂಡಿದ್ದಾರೆ.
ರಸ್ತೆ ಸಮೀಕ್ಷೆ ನಡೆಸಿದ ಬಳಿಕ ಕ್ರಿಯಾಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಲಾಗುವುದುಕುಬೇಂದ್ರ ನಾಯ್ಕ ಎಇಇ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಬಳಸಿ ಕ್ಷೇತ್ರದ ಅರಸೀಕೆರೆ ಬ್ಲಾಕ್‌ನ ಸಮಗ್ರ ಅಭಿವೃದ್ಧಿ ಮಾಡಲಾಗುವುದುಬಿ.ದೇವೇಂದ್ರಪ್ಪ ಶಾಸಕ ಜಗಳೂರು ಕ್ಷೇತ್ರ
ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಬ್ಲಾಕ್‌ಅನ್ನು ಬೇರ್ಪಡಿಸಿ ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳ ಪಟ್ಟಿರುವುದು ಇಲ್ಲಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ನಾಗತಿಕಟ್ಟೆ ಪೋತಲಕಟ್ಟೆ ಹರಪನಹಳ್ಳಿ ಕ್ಷೇತ್ರಕ್ಕೆ ಒಳಪಟ್ಟಿದ್ದು ರಸ್ತೆ ಅಭಿವೃದ್ಧಿ ಕಂಡಿದೆ. ಆದರೆ ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬೇವಿನಹಳ್ಳಿ ಗೌಳಿರಹಟ್ಟಿ ಜಗಳೂರು ಕ್ಷೇತ್ರಕ್ಕೆ ಒಳಪಟ್ಟಿದೆ. ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಂಡಿಲ್ಲ. ‘ಕೆಕೆಆರ್‌ಡಿಬಿ ಅನುದಾನ ತಾರತಮ್ಯದಿಂದ ಕೇವಲ ₹11 ಕೋಟಿ ಬಿಡುಗಡೆ ಆಗಿದೆ. ಈ ಕುರಿತು ಮಂಡಳಿ ಗಮನಕ್ಕೆ ತಂದಿದ್ದು ಹೆಚ್ಚಿನ ಅನುದಾನದ ನಿರೀಕ್ಷೆಯಿದೆ. ಬಳಿಕ ಶಾಲಾ ಹಾಗೂ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು' ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.
ಅರಸೀಕೆರೆ ಭಾಗದ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಿ, ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಬೇಕು –ಪ್ರಶಾಂತ್ ಪಾಟೀಲ್, ಅರಸೀಕೆರೆ
ಅಧಿಕಾರಿಗಳು ಕಚೇರಿಯಿಂದ ಹೊರಬಂದು ಕಾರ್ಯವ್ಯಾಪ್ತಿಯ ಗ್ರಾಮಗಳನ್ನು ವೀಕ್ಷಣೆ ಮಾಡಿ ಅಭಿವೃದ್ಧಿಗೆ ಸ್ಪಂದಿಸಬೇಕು
–ಗುಡಿಹಳ್ಳಿ ಹಾಲೇಶ್, ಪ್ರಗತಿಪರ ಹೋರಾಟಗಾರ
ರಸ್ತೆ ಸಮಸ್ಯೆಗೆ ಗ್ರಾಮಕ್ಕೆ ಅಂಬುಲೆನ್ಸ್ ಬರದಾಗಿದೆ. ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕ್ರಮ ಕೈಗೊಳ್ಳಬೇಕು
–ಬಸವರಾಜ, ಹಿರೇಮೆಗಳಗೇರೆ
ಉಚ್ಚಂಗಿದುರ್ಗಕ್ಕೆ ಭಕ್ತರ ದಂಡು ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಆಗುತ್ತದೆ. ಉಚ್ಚಂಗಿದುರ್ಗ ರಸ್ತೆ ವಿಸ್ತರಣೆಗೆ ಆದ್ಯತೆ ನೀಡಬೇಕಿದೆ
–ಕೆಂಚಪ್ಪ ಕೆ. ಉಚ್ಚಂಗಿದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.