ADVERTISEMENT

ಹೊಸಪೇಟೆ: ಇತಿಹಾಸ ಸೃಷ್ಟಿಗೆ ಸಜ್ಜಾದ ಸಮರ್ಪಣಾ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 19 ಮೇ 2025, 14:25 IST
Last Updated 19 ಮೇ 2025, 14:25 IST
ಸಂಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಸಜ್ಜಾದ ವೇದಿಕೆ  –ಪ್ರಜಾವಾಣಿ ಚಿತ್ರ/ ಲವ ಕೆ.
ಸಂಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಸಜ್ಜಾದ ವೇದಿಕೆ  –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ (ವಿಜಯನಗರ): ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ್ದರ ಪ್ರಯುಕ್ತ ಲಕ್ಷಕ್ಕೂ ಅಧಿಕ ಮಂದಿಗೆ ಹಕ್ಕುಪತ್ರ ವಿತರಿಸುವ ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ನಗರದ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣ ಸಜ್ಜಾಗಿದ್ದು, ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಇಡೀ ನಗರ ನವವಧುವಿನಂತೆ ಸಿಂಗರಿಸಿ ನಿಂತಿದೆ.

ನಗರದ  ತುಂಬೆಲ್ಲ ಕಾಂಗ್ರೆಸ್‌ ನಾಯಕರ ಬ್ಯಾನರ್‌ಗಳು, ಕಟೌಟ್‌ಗಳು ರಾರಾಜಿಸುತ್ತಿದ್ದು, ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಕಾಂಗ್ರೆಸ್‌ ಧ್ವಜಗಳು, ಬಂಟಿಂಗ್ಸ್‌ಗಳು ಗಮನ ಸೆಳೆಯುತ್ತಿವೆ. ಕ್ರೀಡಾಂಗಣದ ಸುತ್ತ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. 2 ಲಕ್ಷಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದಲೇ ಊಟ ಬಡಿಸುವ ಕೆಲಸ ಅರಂಭವಾಗಲಿದೆ. ಅದಕ್ಕಾಗಿ ಸೋಮವಾರ ಸಂಜೆಯಿಂದಲೇ ತಯಾರಿ ಆರಂಭವಾಗಿದೆ.

ರಾಜ್ಯದಲ್ಲಿ ಅತ್ಯಧಿಕ ಕಂದಾಯ ಗ್ರಾಮಗಳನ್ನು ಗುರುತಿಸಿದ ಶ್ರೇಯಸ್ಸು ವಿಜಯನಗರ ಜಿಲ್ಲೆಗೆ ಇದ್ದು, 79 ಸಾವಿರ ರೈತರ ಜಮೀನನ್ನು ಪೋಡಿಮುಕ್ತಗೊಳಿಸಿದ ಹಿರಿಮೆ ಸಹ ಈ ಜಿಲ್ಲೆಗಿದೆ. ಜಿಲ್ಲಾಡಳಿತದ ಮಾಹಿತಿಯಂತೆ ಹರಪನಹಳ್ಳಿ ತಾಲ್ಲೂಕಿನಲ್ಲಿ 117 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದ್ದರೆ, ಕೂಡ್ಲಿಗಿ 96, ಹೂವಿನಹಡಗಲಿ 48, ಹಗರಿಬೊಮ್ಮನಹಳ್ಳಿ 43, ಕೊಟ್ಟೂರು 30 ಹಾಗೂ ಹೊಸಪೇಟೆಯಲ್ಲಿ 15 ಗ್ರಾಮಗಳನ್ನು ಗುರುತಿಸಲಾಗಿದೆ. ಹೀಗಾಗಿ 20 ಸಾವಿರಕ್ಕೂ ಅಧಿಕ ಹಕ್ಕುಪತ್ರಗಳು ಜಿಲ್ಲೆಯ ಫಲಾನುಭವಿಗಳಿಗೇ ವಿತರಣೆಯಾಗಲಿದೆ.

ADVERTISEMENT

‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಮಾತ್ರ ರಾಜ್ಯ ದೇಶಕ್ಕೆ ಮಾದರಿಯಾದುದಲ್ಲ, ಹಕ್ಕುಪತ್ರ ನೀಡಿಕೆ ವಿಚಾರದಲ್ಲೂ ಮಾದರಿಯಾಗಿದೆ. ನಮ್ಮನ್ನು ಅನುಕರಿಸಿ ಇತರ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಗ್ಯಾರಂಟಿ ಯೋಜನೆ ಜಾರಿಗೆ ತರುವುದು ಸಾಧ್ಯವಾಗುತ್ತಿಲ್ಲ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು’ ಎಂಬ ಸಂದೇಶವನ್ನು ಉಪಮುಖ್ಯುಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ನಗರದಿಂದ ರವಾನಿಸಿದ್ದು,  ‘ನಮ್ಮದು ಬದುಕಿನೊಂದಿಗೆ ಶ್ರಮಿಸುವ ಸರ್ಕಾರವೇ  ಹೊರತು ಭಾವನೆಗಳೊಂದಿಗೆ ಆಟವಾಡುವ ಸರ್ಕಾರವಲ್ಲ’ ಎಂದು ಹೇಳಿದ್ದಾರೆ. ದೇಶಕ್ಕೆ ಕಾಂಗ್ರೆಸ್ ಸರ್ಕಾರ ನೀಡಿದ ಹಲವು ಮಹತ್ವದ, ಬಡವರ ಪರ ಯೋಜನೆಗಳನ್ನು ಉಲ್ಲೇಖಿಸಿದರು.

ಇದೇ ಮಾತು ಸಮಾವೇಶದಲ್ಲಿ ಮಾರ್ದನಿಸಲಿದ್ದು, ಬೆಳಿಗ್ಗೆ 10ರಿಂದಲೇ ವೇದಿಕೆಯಲ್ಲಿ ಗಣ್ಯರು ಭಾಷಣ ಆರಂಭಿಸುವ ನಿರೀಕ್ಷೆ ಇದೆ. ಮಧ್ಯಾಹ್ನ 12 ರ ವೇಳೆಗೆ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ವೇದಿಕೆಗೆ ಆಗಮಿಸುವ ನಿರೀಕ್ಷೆ ಇದೆ. 

1978ರಲ್ಲಿ ಇಂದಿರಾ ಗಾಂಧಿ ಅವರು ಗೂಡುಸಾಬ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದ ಸ್ಥಳ ಶಿಥಿಲಾವಸ್ಥೆಯಲ್ಲಿತ್ತು. ಅದನ್ನು ನವೀಕರಿಸಿ, ಅದರಲ್ಲಿ ಇಂದಿರಾ ಅವರ ಪ್ರತಿಮೆ ಸ್ಥಾಪಿಸಲಾಗಿದ್ದು, ಅದನ್ನು ಅನಾವರಣಗೊಳಿಸಿದ ಬಳಿಕವಷ್ಟೇ ಗಣ್ಯರು ವೇದಿಕೆ ಏರಿ ಭಾಷಣ ಮಾಡಲಿದ್ದಾರೆ.

ಬಿಗಿ ಭದ್ರತೆ: ಗಣ್ಯರ ಭದ್ರತೆಗಾಗಿ ಭಾರಿ ವ್ಯವಸ್ಥೆ ಮಾಡಲಾಗಿದ್ದು, 400ಕ್ಕೂ ಅಧಿಕ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಮೈದಾನದ ಸುತ್ತಮುತ್ತ ಹಾಗೂ ನಗರದ ಪ್ರಮುಖ ವೃತ್ತಗಳು, ಸ್ಥಳಗಳಲ್ಲಿ ಅವಳವಡಿಸಲಾಗಿದೆ. 

ಮಳೆ ತಂದ ಆತಂಕ: ಭಾನುವಾರ ರಾತ್ರಿ ಸುರಿದ ಬಿರುಸಿನ ಮಳೆ ಸ್ವಲ್ಪ ಆತಂಕ ತಂದಿತ್ತು. ಆದರೆ ಸೋಮವಾರ ಮಳೆ ಮೋಡ ಇದ್ದರೂ ಮಳೆ ಸುರಿಯುವ ಸಾಧ್ಯತೆ ಕಡಿಮೆ ಇದ್ದುದನ್ನು ಕಂಡ ಕಾರ್ಯಕರ್ತರು, ಅಧಿಕಾರಿಗಳು ಸ್ವಲ್ಪ ನಿರಾಳರಾದರು. 

ಸಮಾವೇಶದಲ್ಲಿ ಪಾಲ್ಗೊಳ್ಳುವವರ ಊಟಕ್ಕೆ ಸಜ್ಜುಗೊಂಡ ಅಡುಗೆ ಮನೆ  –ಪ್ರಜಾವಾಣಿ ಚಿತ್ರ
ಹೊಸಪೇಟೆ ನಗರದ ತುಂಬೆಲ್ಲ ರಾರಾಜಿಸುತ್ತಿರುವ ಕಾಂಗ್ರೆಸ್ ಬ್ಯಾನರ್‌ಗಳು ಬಂಟಿಂಗ್‌ಗಳು

ಬಸ್‌ ನಿಲುಗಡೆ ವ್ಯವಸ್ಥೆ

ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ 4250ರಷ್ಟು ಕೆಎಸ್‌ಆರ್‌ಟಿಸಿ  ಮತ್ತು ಖಾಸಗಿ ಬಸ್‌ಗಳು ಬರಲಿದ್ದು ಅವುಗಳನ್ನು ಜಿಲ್ಲಾವಾರು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಕೆಲವು ಕಡೆಗಳಲ್ಲಿನ ಬಸ್‌ಗಳು ಒಳಾಂಗಣ ಕ್ರೀಡಾಂಗಣದ ಬಳಿ ಪ್ರಯಾಣಿಕರನ್ನು ಇಳಿಸಿ ತಮಗೆ ನಿಗದಿಪಡಿಸಿ ಪಾರ್ಕಿಂಗ್ ಸ್ಥಳಕ್ಕೆ ಹೋಗಬೇಕು ಹಾಗೂ ಸಮಾವೇಶ ಮುಗಿದ ಬಳಿಕ ಅಲ್ಲಿಗೇ ಬಂದು ತಮ್ಮ ಬಸ್‌ಗಳಲ್ಲಿ ಬಂದವರನ್ನು ಹತ್ತಿಸಿಕೊಂಡು ತಮ್ಮ ಊರಿನತ್ತ ತೆರಳಬೇಕು. ಕೆಲವು ಬಸ್‌ಗಳಿಗೆ ಅಂಬೇಡ್ಕರ್‌ ವೃತ್ತದಲ್ಲಿ ಪ್ರಯಾಣಿಕರನ್ನು ಇಳಿಸಲು ತಿಳಿಸಲಾಗಿದೆ. ಬಳ್ಳಾರಿಯಿಂದ 700 ಬಸ್‌ಗಳು ಬರಲಿದ್ದು ಅವುಗಳು ಐಎಸ್‌ಅರ್‌ ವೃ್ತ್ತದಲ್ಲಿ ಪ್ರಯಾಣಿಕರನ್ನು ಇಳಿಸಿ ಐಎಸ್‌ಆರ್ ಪ್ರದೇಶದಲ್ಲಿ ನಿಲುಗಡೆ ಮಾಡಬೇಕು. ವಿಜಯನಗರ ಜಿಲ್ಲೆಯ ಬಸ್‌ಗಳು ಒಳಾಂಗಣ ಕ್ರೀಡಾಂಗಣದ ಬಳಿ ಜನರನ್ನು ಇಳಿಸಿ ಮುನೀರ್ ಶೋರೂಂ ಖಾಲಿ ಸ್ಥಳದಲ್ಲಿ ನಿಲುಗಡೆ ಮಾಡಬೇಕು  ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್. ತಿಳಿಸಿದ್ದಾರೆ.  ಬಾಗಲಕೋಟೆಯ 200  ಬಸ್‌ಗಳು ವಿಜಯಪುರದಿಂದ ಬರುವ 200 ಬಸ್‌ಗಳು  ಆರ್.ಆರ್. ಲೇಔಟ್‌ನಲ್ಲಿ ಬೀದರ್ ಚಾಮರಾಜನಗರ ಚಿಕ್ಕಬಳ್ಳಾಪುರ ಗದಗ ಕಲಬುರ್ಗಿ ಕೋಲಾರ ರಾಮನಗರ ರಾಯಚೂರು ಯಾದಗಿರಿ ತುಮಕೂರುಗಳಿಂದ ಬರುವ ಬಸ್‌ಗಳು ಭಟ್ರಳ್ಳಿ ಆಂಜನೇಯ ದೇವಸ್ಥಾನ ಬಳಿಯ ಮೈದಾನದಲ್ಲಿ ಕೊಪ್ಪಳದಿಂದ ಬರುವ ಬಸ್‌ಗಳು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಹಾವೇರಿಯಿಂದ ಬರುವ ಬಸ್‌ಗಳು ಗುರು ಕಾಲೇಜ್‌ ಮೈದಾನದಲ್ಲಿ ನಿಲುಗಡೆ ಮಾಡಬೇಕು ಎಂದು ತಿಳಿಸಲಾಗಿದೆ.

ಕಾಂಗ್ರೆಸ್ ಕೊಡುಗೆ ದೊಡ್ಡದು

ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ನಾಯಕರ ಕೊಡುಗೆ ದೊಡ್ಡದಿದೆ. ತುಂಗಭದ್ರಾ ಅಣೆಕಟ್ಟು ಜವಾಹರಲಾಲ್ ನೆಹರೂ ಅವರ ದೂರದೃಷ್ಟಿಯ ಫಲವಾದರೆ ಜಿಂದಾಲ್‌ ಉಕ್ಕಿನ ಕಾರ್ಖಾನೆ ಇಂದಿರಾ ಗಾಂಧಿ ಅವರ ಕೊಡುಗೆಗಳಲ್ಲಿ ಒಂದು. ಕುಡುತಿನಿಯ ಉಷ್ಣ ವಿದ್ಯುತ್ ಸ್ಥಾವರ ಸೋನಿಯಾ ಗಾಂಧಿ ಅವರು ತಮ್ಮ ಕ್ಷೇತ್ರಕ್ಕೆ ಉಡುಗೊರೆಯಾಗಿ ನೀಡಿದ ಯೋಜನೆ. ಕಾಂಗ್ರೆಸ್ ಇನ್ನು ಮುಂದೆಯೂ ಇಂತಹ ಕೊಡುಗೆಗಳನ್ನು ಕೊಡಬೇಕು ಹಾಗಿದ್ದರೆ ಬಿಜೆಪಿಯ ಸವಾಲನ್ನು ಈ ಭಾಗದಲ್ಲಿ ಎದುರಿಸಿ ನಿಲ್ಲಬಹುದು ಎಂಬುದು ಕಾರ್ಯಕರ್ತರ ಆಶಯವಾಗಿದೆ.

ಬಸ್‌ ಸೇವೆಯಲ್ಲಿ ವ್ಯತ್ಯಯ ಇಂದು

ಹೊಸಪೇಟೆ ನಗರದಲ್ಲಿ 20 ರಂದು ನಡೆಯುತ್ತಿರುವ ‘ಪ್ರಗತಿಯತ್ತ ಕರ್ನಾಟಕ ಸಮರ್ಪಣೆ ಸಂಕಲ್ಪ’ ಸಮಾವೇಶಕ್ಕೆ ಕೆಕೆಎಸ್‌ಆರ್‌ಟಿಸಿ ಬಳ್ಳಾರಿ ವಿಭಾಗದಿಂದ ಒಟ್ಟು 225 ಬಸ್ಸುಗಳನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ಒದಗಿಸಲಾಗುತ್ತಿದ್ದು ದೈನಂದಿನ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿವೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಕ್ಕುಪತ್ರ ಮತ್ತು ವಿವಿಧ ಸವಲತ್ತುಗಳ ವಿತರಣೆ ಮಾಡಲಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆದೊಯ್ಯಲಾಗುತ್ತಿದೆ. ಈ ನಿಟ್ಟಿನಲ್ಲಿ ಮೇ 20 ರಂದು ಬಳ್ಳಾರಿ ಸಿರುಗುಪ್ಪ ತೆಕ್ಕಲಕೋಟೆ ಕುರುಗೋಡು ಕುಡತಿನಿ ಕಂಪ್ಲಿ ಮತ್ತು ಸಂಡೂರು ವಿಭಾಗದಿಂದ ವಿವಿಧ ಸ್ಥಳಗಳಿಗೆ ತೆರಳುವ ಬಸ್ಸುಗಳ ದೈನಂದಿನ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿವೆ. ಸಾರ್ವಜನಿಕ ಪ್ರಯಾಣಿಕರು ಸಹಕರಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.