ಹೊಸಪೇಟೆ (ವಿಜಯನಗರ): ವರ್ಷಗಳಿಂದ ಬಾಕಿಯಿದ್ದ ಭೂ ಹಕ್ಕುಪತ್ರವನ್ನು ಪಡೆದ ಸಂಭ್ರಮ ಜನರ ಮೊಗದಲ್ಲಿದ್ದರೆ, ಅದನ್ನು ಅಚ್ಚುಕಟ್ಟಾಗಿ ವಿತರಿಸಿದ ಸಚಿವರ ಮುಖದಲ್ಲಿ ಸಂತೃಪ್ತಿ ಇತ್ತು. ‘ನುಡಿದಂತೆ ನಡೆದಿದ್ದೇವೆ ಎಂದು ಸಾರಿ ಹೇಳಬೇಕಿಲ್ಲ. ಎಲ್ಲವೂ ನಿಮ್ಮೆಲ್ಲರ ಕಣ್ಣೆದುರೇ ಇದೆ’ ಎಂದು ಹೇಳುವ ಸಾರ್ಥಕಭಾವ ನಾಯಕರ ಮಾತುಗಳಲ್ಲಿ ಇತ್ತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಎರಡು ವರ್ಷ ಪೂರೈಸಿದ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿ ಆಯೋಜಿಸಲಾಗಿದ್ದ ಸಂಕಲ್ಪ ಸಮಾವೇಶವು ಹಲವು ಕಾರಣಗಳಿಂದ ಮಹತ್ವ ಪಡೆಯಿತು. ನಿರಂತರ ಸುರಿದ ವರ್ಷಧಾರೆಯು ಸಮಾವೇಶವನ್ನು ಕೊಂಚ ತಂಪು, ಹಿತಕರ ಮಾಡಿತು.
‘ಮನೆ ಮಗ ಉಂಡರೆ ತಪ್ಪಿಲ್ಲ, ಮಳೆ ಬಂದರೆ ತಪ್ಪಿಲ್ಲ’ ಎಂಬ ಗಾದೆ ನೆನಪಿಸಿಕೊಂಡ ಸಚಿವ ಎಚ್.ಕೆ.ಪಾಟೀಲ ಅವರು, ‘ಮಳೆ ಎಂಬುದು ಪ್ರಗತಿ, ಅಭಿವೃದ್ಧಿಯ ಸಂಕೇತ. ಹೆಚ್ಚು ಮಳೆಯಾದಷ್ಟು ಸಂತೋಷ ಪಸರಿಸುತ್ತೆ’ ಎಂದರು. ಇದಕ್ಕೂ ಮುನ್ನ ಸಚಿವ ಕೃಷ್ಣ ಬೈರೇಗೌಡರು, ‘ಮಳೆಯು ನಮ್ಮ ಸಮ್ಮೇಳನಕ್ಕೆ ಅಕ್ಷರಶಃ ಹರಿಸಿದೆ. ಮಳೆಯಿಂದ ಅಲ್ಲಿ ಇಲ್ಲಿ ಸ್ವಲ್ಪ ತೊಂದರೆಯಾಗಿದೆ’ ಎಂದರು.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆದ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಲಕ್ಷಾಂತರ ಜನರು ಸಾಕ್ಷಿಯಾದರು. ಪ್ರತಿಯೊಬ್ಬರ ಭಾಷಣವನ್ನು ಆಲಿಸಿದ ಸಭಿಕರು, ಕೆಲ ನಾಯಕರ ಮಾತುಗಳಿಗೆ ಹರ್ಷೋದ್ಗಾರ ವ್ಯಕ್ತಪಡಿಸಿದರು. ‘ಸರ್ಕಾರವು ಇನ್ನಷ್ಟು ಸೌಲಭ್ಯ ಕಲ್ಪಿಸಲಿದೆ’ ಎಂದು ಖುಷಿಯಿಂದ ದೀರ್ಘ ಕಾಲದವರೆಗೆ ಚಪ್ಪಾಳೆ ತಟ್ಟಿದರು.
ಮಳೆಯ ಕಾರಣದಿಂದ ಸಮಾವೇಶ ಸ್ಥಳಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಡವಾಗಿ ಬಂದರು. ಅವರು ಬರುತ್ತಿದ್ದಂತೆಯೇ ಹಸಿರು, ಕೇಸರಿ ಮತ್ತು ಬಿಳಿ ಬಣ್ಣದ ಚಿಟಿಕೆ ಕಾಗದಗಳನ್ನು ಸುರಿದು, ಸ್ವಾಗತಿಸಲಾಯಿತು.
ಇಡೀ ಸಮಾವೇಶದ ನಿರೂಪಣೆಯನ್ನು ನಿರ್ವಹಿಸಿದ ಕೃಷ್ಣ ಬೈರೇಗೌಡರು, ಬಹುತೇಕ ಸಚಿವರಿಗೆ ಮತ್ತು ಶಾಸಕರಿಗೆ ಮಾತನಾಡಲು ಕಲ್ಪಿಸಿಕೊಟ್ಟರು ಅಲ್ಲದೇ ಸರ್ಕಾರದ ಸಾಧನೆಯನ್ನು ಒಂದೊಂದಾಗಿ ವಿವರಿಸಿದರು. ‘ಯಾರ ಜೊತೆಗೂ ಯಾವುದೇ ಮುನಿಸಿಲ್ಲ. ಸಮಸ್ಯೆಯಂತೂ ಇಲ್ಲ’ ಎಂಬಂತೆ ಸಚಿವರು ಮತ್ತು ಶಾಸಕು ತಮ್ಮ ಇಲಾಖೆ ಮತ್ತು ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಕಾರ್ಯಗಳ ವರದಿ ವಿವರಿಸಿದರು. ಅನುದಾನದ ಬಳಕೆ ಬಗ್ಗೆಯೂ ಮಾಹಿತಿ ನೀಡಿದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದು ಯಾಕೆ ಎಂಬ ಬಗ್ಗೆ ವಿವರ ನೀಡಿದ ಕೃಷ್ಣ ಬೈರೇಗೌಡರು, ‘2015ರಲ್ಲಿ ಹಾವೇರಿಗೆ ಬಂದಿದ್ದ ರಾಹುಲ್ ಗಾಂಧಿ ಅವರು ಹಕ್ಕುಪತ್ರಗಳ ಬಗ್ಗೆ ಮಾತು ನೀಡಿದ್ದರು. ಇಂದಿನ ಹಕ್ಕುಪತ್ರ ವಿತರಣೆಗೆ ಅವರು ಸಾಕ್ಷಿಯಾಗಲಿ ಮತ್ತು ಅವರಿಂದಲೇ ವಿತರಣೆಯಾಗಲಿ ಎಂಬ ಉದ್ದೇಶದಿಂದ ಅವರನ್ನು ಕರೆದಿದ್ದೇವೆ’ ಎಂದರು.
ಶಿಸ್ತಿನ ಊಟ: ಬೆಳಿಗ್ಗೆ 10.30ರ ವೇಳೆಗೇ ಊಟ ಆರಂಭವಾತು. ಪುಲಾವ್, ಮೊಸರನ್ನ, ಮೈಸೂರು ಪಾಕ್ ಜನರ ಹೊಟ್ಟೆ ತುಂಬಿಸಿತು. ಪೆಂಡಾಲ್‌ನ ಎರಡೂ ಬದಿ ತಲಾ 20 ಕೌಂಟರ್‌ಗಳಲ್ಲಿ ಊಟು ಬಡಿಸುವ ವ್ಯವಸ್ಥೆ ಮಾಡಲಾಗಿತ್ತು. ನೂಕುನುಗ್ಗಲಿಗೆ ಅವಕಾಶ ಇರಲಿಲ್ಲ. ಮಳೆ ಸುರಿದರೂ ಊಟಕ್ಕೆ ತೊಂದರೆ ಆಗಲಿಲ್ಲ.
ಸಮಾವೇಶದಲ್ಲಿ 3 ಲಕ್ಷ ಮಂದಿ ಪಾಲ್ಗೊಳ್ಳುವರು ಎಂಬ ನಿರೀಕ್ಷೆಯಿತ್ತು. ವೇದಿಕೆಯ ಒಳಗೆ ಮತ್ತು ಅಕ್ಕಪಕ್ಕದಲ್ಲಿ 1.5 ಲಕ್ಷದಷ್ಟು ಜನರಿದ್ದರು ಹಾಗೂ 50 ಸಾವಿರಕ್ಕೂ ಹೆಚ್ಚು ಮಂದಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರು. ಹೀಗಾಗಿ ಅವರಿಗೆ ಮೈದಾನದ ಬಳಿ ಬೇಗನೇ ಬರಲು ಸಾಧ್ಯವಾಗಲಿಲ್ಲ.
ಹೊಸಪೇಟೆಯಲ್ಲಿ ಮಂಗಳವಾರ ನಡೆದ ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಸ್ತಲಾಘವ ಮಾಡಿದರು.
ಸಮಾವೇಶ: 14 ಕಿ.ಮೀ.ಸಂಚಾರ ದಟ್ಟಣೆ
ಹೊಸಪೇಟೆ (ವಿಜಯನಗರ): ಸಮರ್ಪಣೆ ಸಂಕಲ್ಪಕ್ಕೆ ಮಂಗಳವಾರ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವಾಹನಗಳು ಬಂದ ಕಾರಣ ನಗರದ ನಾಲ್ಕೂ ದಿಕ್ಕುಗಳಲ್ಲೂ 12ರಿಂದ 14 ಕಿ.ಮೀ.ವರೆಗೆ ಸಂಚಾರ ದಟ್ಟಣೆಯಾಯಿತು.
ಹೊಸಪೇಟೆಯಿಂದ ಬೆಂಗಳೂರು ರಸ್ತೆಯ ಮರಿಯಮ್ಮನಹಳ್ಳಿಯವರೆಗೆ, ಬಳ್ಳಾರಿ ರಸ್ತೆಯ ಪಾಪಿನಾಯನಕಹಳ್ಳಿವರೆಗೆ, ಹಂಪಿ ರಸ್ತೆಯಲ್ಲಿ ಕಮಲಾಪುರವರೆಗೆ, ಕೊಪ್ಪಳ ರಸ್ತೆಯಲ್ಲಿ ಹೊಸಹಳ್ಳಿ ಟೋಲ್‌ಗೇಟ್‌ವರೆಗೆ, ಸಂಡೂರು ರಸ್ತೆಯಲ್ಲಿ ಕಲ್ಲಹಳ್ಳಿ, ರಾಜಾಪುರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳ್ಳಾರಿ ಬೈಪಾಸ್ ರಸ್ತೆಯಿಂದ ನಗರದ ಬಸ್ ನಿಲ್ದಾಣಕ್ಕೆ ಕೇವಲ ಮೂರು ಕಿ.ಮೀ. ಇದೆ, ವಾಹನಗಳು ಇಷ್ಟು ದೂರ ಕ್ರಮಿಸಲು ಮೂರು ಗಂಟೆ ತೆಗೆದುಕೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.