ADVERTISEMENT

ಒಳಮೀಸಲಾತಿ: ಆ.11ರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 7:52 IST
Last Updated 22 ಜುಲೈ 2025, 7:52 IST
   

ಹೊಸಪೇಟೆ (ವಿಜಯನಗರ): ವಿಧಾನಮಂಡಲದ ಮುಂಗಾರು ಅಧಿವೇಶನ ಆಗಸ್ಟ್‌ 11ರಿಂದ ಆರಂಭವಾಗಲಿದ್ದು, ಅದೇ ದಿನದಿಂದ ಒಳಮೀಸಲಾತಿ ಜಾರಿಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಅವಧಿಯ ಅಹೋರಾತ್ರಿ ಸತ್ಯಾಗ್ರಹ ಅರಂಭವಾಗಲಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಹೇಳಿದೆ.

ಸಮಿತಿಯ ರಾಜ್ಯ ಸಂಚಾಲಕ ಕರಿಯಪ್ಪ ಗುಡಿಮನಿ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ, ಮುಂಗಾರು ಅಧಿವೇಶನದಲ್ಲೇ ಒಳಮೀಸಲಾತಿ ಜಾರಿಗೊಳಿಸುವ ತೀರ್ಮಾನವನ್ನು ಸರ್ಕಾರ ಕೈಗೊಳ್ಳಬೇಕು, ಜನಪ್ರತಿನಿಧಿಗಳು ಬೀದಿಗಳಲ್ಲಿ ಹೋರಾಡುವ ಅಗತ್ಯವಿಲ್ಲ, ವಿಧಾನಸೌಧದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿದರೆ ಸಾಕು ಎಂದರು.

ಪರಿಶಿಷ್ಟರ ಬಹುವರ್ಷಗಳ ಒಳಮೀಸಲಾತಿ ಬೇಡಿಕೆಯನ್ನು ರಾಜ್ಯ ಸರ್ಕಾರಗಳು ಆದ್ಯತೆಯ ಮೇರೆಗೆ ಜಾರಿಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಆಗಸ್ಟ್‌ 1ಕ್ಕೆ ಒಂದು ವರ್ಷ ಆಗುತ್ತಿದೆ. ಸರ್ಕಾರ ಇನ್ನಷ್ಟು ವಿಳಂಬ ತಂತ್ರ ಅನುಸರಿಸದೆ ಒಳಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ಒಳಮೀಸಲಾತಿಗಾಗಿ ಹೋರಾಟ ನಡೆಸುವ ಅಗತ್ಯ ಇಲ್ಲ ಎಂಬ ಮಾಜಿ ಸಚಿವ ಎಚ್‌.ಆಂಜನೇಯ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ನಾವಿಲ್ಲ. ಅವರು ರಾಜಕೀಯ ಕಾರಣಕ್ಕೆ ಇಂತಹ ಹೇಳಿಕೆ ನೀಡಿದ್ದಾರೆ ಅಷ್ಟೇ. ಅವರು ಸರ್ಕಾರದ ಮೇಲೆ ಇದಕ್ಕೆ ಮೊದಲೇ ಒತ್ತಡ ಹಾಕಿದ್ದರೆ ನಾವು ಪ್ರತಿಭಟಿಸುವ ಅಗತ್ಯ ಬೀಳುತ್ತಿರಲಿಲ್ಲ ಎಂದರು.

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರು ಹೇಳಿಕೆ ನೀಡಿದಂತೆ, ಆಗಸ್ಟ್‌ 1ರಂದು ಜಿಲ್ಲಾಧಿಕಾರಿ ಕಚೇರಿಗಳ ಬಳಿ ನಡೆಸುವ ಪ್ರತಿಭಟನೆಗಳಲ್ಲಿ ನಾವು ಪಾಲ್ಗೊಳ್ಳುವುದಿಲ್ಲ. ಆದರೆ ಅವರು ನಡೆಸುವ ಹೋರಾಟಕ್ಕೆ ನಮ್ಮ ವಿರೋಧ ಇಲ್ಲ ಎಂದರು.

ಅಲೆಮಾರಿ ಬುಡಕಟ್ಟು ಸಮಾಜದ ರಾಜ್ಯ ಮುಖಂಡ ಸಣ್ಣಮಾರೆಪ್ಪ, ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಕಾರಿಗನೂರು ಲಕ್ಷ್ಮಣ, ಡಿಎಸ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕೊಟಗಿನಾಳ, ಮುಖಂಡರಾದ ಶೇಖರ್ ಡಿ.ಚನ್ನದಾಸರ, ರಮೇಶ್‌ ಜೆ. ಎಚ್‌.ಲಕ್ಷ್ಮಣ, ಎಚ್‌.ನಾಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.