ADVERTISEMENT

ಹೊಸಪೇಟೆ: 6 ಜನ ತಿಮಿಂಗಿಲ ವಾಂತಿ ಮಾರಾಟಗಾರರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 14:05 IST
Last Updated 22 ಡಿಸೆಂಬರ್ 2021, 14:05 IST
   

ಹೊಸಪೇಟೆ (ವಿಜಯನಗರ): ಕೋಟ್ಯಂತರ ರೂಪಾಯಿ ಮೌಲ್ಯದ ತಿಮಿಂಗಿಲ ವಾಂತಿಯೊಂದಿಗೆ ಆರು ಜನ ಆರೋಪಿಗಳನ್ನು ಬುಧವಾರ ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಪ್ಪಳದ ಬಂಡಿಹರಳಾಪುರದ ಲಂಬಾಣಿ ವೆಂಕಟೇಶ (35), ಅಬ್ದುಲ್‌ ವಹಾಬ್ (23), ಮುರಡೇಶ್ವರದ ಹಿರಮನೆ ಗಣಪತಿ (42), ಹುಬ್ಬಳ್ಳಿ ಬೆಂಗೇರಿಯ ಪುಂಡಲಿಕ್ ಲಕ್ಷ್ಮಣ (34), ಮಹೇಶ ಡೊಂಗ್ರಿ (33), ವಿಜಯಪುರದ ಶ್ರೀಧರ ಹೇಮಂತ್‌ ನ್ಯಾಯಾಂಗ ಬಂಧನಕ್ಕೆ ಒಳಗಾದವರು. ಬಂಧಿತರಿಂದ ಒಂದೂವರೆ ಕೆ.ಜಿ. ತಿಮಿಂಗಿಲ ವಾಂತಿ ವಶಪಡಿಸಿಕೊಳ್ಳಲಾಗಿದೆ.

‘ಲಂಬಾಣಿ ವೆಂಕಟೇಶ ಹಾಗೂ ಅಬ್ದುಲ್‌ ವಹಾಬ್‌ ಅವರು ನಗರದ ಬಸ್‌ ನಿಲ್ದಾಣ, ಎಸ್‌.ವಿ.ಕೆ. ಬಸ್‌ ನಿಲ್ದಾಣದ ಬಳಿ ತಿಮಿಂಗಿಲ ವಾಂತಿಯನ್ನು ಮಾರಾಟಕ್ಕೆ ಓಡಾಡುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಅನುಮಾನ ಬಂದು ವಿಚಾರಿಸಿದಾಗ ವಿಷಯ ತಿಳಿಸಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಾಲ್ವರ ಬಗ್ಗೆ ಮಾಹಿತಿ ನೀಡಿದ್ದಾರೆ. ತಂಡ ರಚಿಸಿ ಮಿಕ್ಕುಳಿದವರನ್ನು ವಶಕ್ಕೆ ಪಡೆದಿದ್ದಾರೆ. ಒಂದು ಕೆ.ಜಿ. ತಿಮಿಂಗಿಲ ವಾಂತಿಗೆ ಮಾರುಕಟ್ಟೆಯಲ್ಲಿ ಕೋಟಿಗೂ ಅಧಿಕ ಬೆಲೆ ಇದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಬುಧವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.