ಹೊಸಪೇಟೆ (ವಿಜಯನಗರ): ಬಗೆಬಗೆಯ ಮಣ್ಣಿನ ಮೂರ್ತಿಗಳನ್ನು ತಯಾರಿಸಿ, ಅವುಗಳನ್ನು ಮಾರಾಟ ಮಾಡಿ ಬದುಕಿನ ನೊಗ ಎಳೆಯುತ್ತಿದ್ದಾರೆ ನಗರದ ಪರಶುರಾಮ ಚಿತ್ರಗಾರ.
ಆಯಾ ಹಬ್ಬ ಹರಿದಿನಗಳಿಗೆ ಅನುಗುಣವಾಗಿ ದೇವರ ಮೂರ್ತಿಗಳನ್ನು ತಯಾರಿಸುತ್ತಾರೆ. ಅವುಗಳಿಗೆ ಮನೆಯಲ್ಲೇ ಬಣ್ಣ ಬಳಿದು ಅಂದ, ಚೆಂದಗೊಳಿಸುತ್ತಾರೆ.
ಇಷ್ಟರಲ್ಲೇ ಮಣ್ಣೆತ್ತಿನ ಅಮವಾಸ್ಯೆ ಇರುವುದರಿಂದ ಈಗ ವಿವಿಧ ಬಗೆಯ ಮಣ್ಣಿನ ಎತ್ತುಗಳನ್ನು ಮಾಡಿದ್ದಾರೆ. ಮಣ್ಣು ಮತ್ತು ಸುಣ್ಣ ಬೆರೆಸಿ, ಅಚ್ಚು ಮತ್ತು ಕೈಗಳಿಂದ ಮಣ್ಣಿನ ಎತ್ತು ಮಾಡಿ ಅವುಗಳಿಗೆ ಸರಿ ಹೊಂದುವ ಬಣ್ಣ ಬಳಿಯುತ್ತಾರೆ. ಇವರ ಕೆಲಸಕ್ಕೆ ಕುಟುಂಬ ಸದಸ್ಯರು ಸಹಕಾರ ಕೊಡುತ್ತಾರೆ.
ಅಚ್ಚಿನಿಂದ ತಯಾರಿಸಿದ ಮಣ್ಣಿನ ಜೋಡಿ ಎತ್ತುಗಳಿಗೆ ₹150 ಇದ್ದರೆ, ಕೈಗಳಿಂದ ಮಾಡಿದ ಎತ್ತುಗಳಿಗೆ ₹100 ಬೆಲೆ ನಿಗದಿಗೊಳಿಸಿದ್ದಾರೆ. ಹೀಗಿದ್ದರೂ ಜನ ಚೌಕಾಸಿ ಮಾಡಿ ಅದಕ್ಕೂ ಕಡಿಮೆ ಬೆಲೆಗೆ ಕೊಂಡೊಯ್ಯುತ್ತಾರೆ. ಹಬ್ಬದ ವರೆಗಷ್ಟೇ ಬೇಡಿಕೆ ಇರುವುದರಿಂದ ಇವರು ಐದ್ಹೈತ್ತು ರೂಪಾಯಿ ಚೌಕಾಸಿ ಮಾಡಿದರೂ ಕೊಡುತ್ತಾರೆ.
‘ಗಣೇಶ, ದುರ್ಗಾದೇವಿ, ವಿಶ್ವಕರ್ಮ, ಕಾಮದೇವ ಮೂರ್ತಿಗಳನ್ನು ಹಬ್ಬಗಳ ಸಮಯದಲ್ಲಿ ತಯಾರಿಸಿ ಮಾರುತ್ತೇನೆ. ಕಾರಹುಣ್ಣಿಮೆ ಸಮಯದಲ್ಲಿ ಎತ್ತುಗಳ ಕೊಂಬಿಗೆ ಚಿತ್ರಾಲಂಕಾರ ಮಾಡುತ್ತೇನೆ. ಹೆಚ್ಚಿನದಾಗಿ ಚಿಕ್ಕ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತೇನೆ. ಬೇಡಿಕೆ ಬಂದರಷ್ಟೇ ದೊಡ್ಡ ಗಾತ್ರದ ಮೂರ್ತಿ ಮಾಡಿಕೊಡುತ್ತೇನೆ. ಕಳೆದ ನಲವತ್ತು ವರ್ಷಗಳಿಂದ ಈ ವೃತ್ತಿ ಮಾಡುತ್ತಿದ್ದೇನೆ’ ಎಂದು ಪರಶುರಾಮ ತಿಳಿಸಿದರು.
ಸಾಮಾನ್ಯ ದಿನಗಳಲ್ಲಿ ಮನೆಯ ಗೋಡೆಗೆ ಬಣ್ಣ, ನಾಮಫಲಕಗಳನ್ನು ಬರೆಯುತ್ತಾರೆ. ಕೋವಿಡ್ ಲಾಕ್‌ಡೌನ್‌ನಿಂದ ಅವರಿಗೆ ಈಗ ಎಲ್ಲೂ ಕೆಲಸ ಸಿಗುತ್ತಿಲ್ಲ. ಹೋದ ವರ್ಷ ಮೂರ್ತಿಗಳು ಮಾರಾಟವಾಗದೇ ನಷ್ಟ ಉಂಟಾಗಿತ್ತು. ಈ ಸಲ ಹಾಗಾಗದಿದ್ದರೆ ಸಾಕು ಎಂದು ಆಕಾಶದ ಕಡೆಗೆ ಮುಖ ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.