ADVERTISEMENT

ವಿಜಯನಗರ: ಅಂತರ ಮರೆತು ಪಾಲ್ಗೊಂಡ ಭಕ್ತರು; ಊರಮ್ಮ ದೇವಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 16:30 IST
Last Updated 20 ಜುಲೈ 2021, 16:30 IST
ಹೊಸಪೇಟೆಯ ರಾಮ ಟಾಕೀಸ್‌ ಬಳಿ ದೇವಿಯನ್ನು ವಾಹನದಲ್ಲಿ ಕರೆದೊಯ್ಯುವಾಗ ನೂರಾರು ಜನ ಸೇರಿದ್ದರು
ಹೊಸಪೇಟೆಯ ರಾಮ ಟಾಕೀಸ್‌ ಬಳಿ ದೇವಿಯನ್ನು ವಾಹನದಲ್ಲಿ ಕರೆದೊಯ್ಯುವಾಗ ನೂರಾರು ಜನ ಸೇರಿದ್ದರು   

ಹೊಸಪೇಟೆ (ವಿಜಯನಗರ): ಆಷಾಢ ಮಾಸದ ಪ್ರಯುಕ್ತ ನಗರದ ಊರಮ್ಮ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಊರಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ನಗರ ಸೇರಿದಂತೆ ವಿವಿಧ ಭಾಗಗಳ ಗ್ರಾಮಸ್ಥರು ಬಂದದ್ದರಿಂದ ಜನದಟ್ಟಣೆ ಉಂಟಾಗಿತ್ತು. ಬಹುತೇಕರು ಮಾಸ್ಕ್‌ ಧರಿಸಿರಲಿಲ್ಲ. ಅಂತರ ಮರೆತು ಪಾಲ್ಗೊಂಡಿದ್ದರು.

ಸಮೃದ್ಧವಾಗಿ ಮಳೆಯಾಗಿ, ಬೆಳೆ ಬೆಳೆದು ರೈತರ ಬದುಕು ಹಸನಾಗಲೆಂದು ಒಂದು ಊರಿನಿಂದ ಮತ್ತೊಂದು ಊರಿಗೆ ದೇವಿಯನ್ನು ಬರಮಾಡಿಕೊಂಡು, ಪೂಜೆ ನೆರವೇರಿಸಿ ಬೀಳ್ಕೊಡಲಾಗುತ್ತದೆ. ಕೋವಿಡ್‌ನಿಂದಾಗಿ ಈ ವರ್ಷ ಮೆರವಣಿಗೆ ಮಾಡಲಿಲ್ಲ. ವಾಹನದಲ್ಲಿ ದೇವರನ್ನು ಕೂರಿಸಿ, ಪೂಜಾ ಸಾಮಗ್ರಿಗಳೊಂದಿಗೆ ಊರಿನಿಂದ ಊರಿಗೆ ಕಳಿಸಲಾಯಿತು.

ADVERTISEMENT

ತಾಲ್ಲೂಕಿನ ಕಲ್ಲಹಳ್ಳಿ, ರಾಜಾಪುರ ಗ್ರಾಮಸ್ಥರು ಗ್ರಾಮದ ದೇವರನ್ನು ಪೂಜೆ ಮಾಡಿ ನಗರದ ಬೈಪಾಸ್ ರಸ್ತೆಯ ಬಳಿ ಬೀಳ್ಕೊಟ್ಟರು. ಅಲ್ಲಿಂದ ನಗರದ ಊರಮ್ಮ ದೇವಸ್ಥಾನದ ವರೆಗೆ ಭಕ್ತರು ದೇವಿಯನ್ನು ಕರೆತಂದರು. ಕಾಯಿ, ಕರ್ಪೂರ, ನೈವೇದ್ಯ ಸಮರ್ಪಿಸಿದರು. ರಾಮ ಟಾಕೀಸ್‌ ಬಳಿ ದೇವಿಯನ್ನು ಕಣ್ತುಂಬಿಕೊಳ್ಳಲು ನೂರಾರು ಜನ ಸೇರಿದ್ದರು. ಬಳಿಕ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಅನಂತಶಯನಗುಡಿಗೆ ಕಳಿಸಿಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.