ADVERTISEMENT

ಹಂಪಿ ಉತ್ಸವ: ತಂತ್ರಜ್ಞಾನ ಮೂಡಿಸಿದ ಕೌತುಕ!

ಇದೇ ಮೊದಲ ಬಾರಿಗೆ ಕಂಡ ಡ್ರೋನ್‌ ಶೋದಿಂದ ಪ್ರೇಕ್ಷಕರು ಅಚ್ಚರಿ

ಎಂ.ಜಿ.ಬಾಲಕೃಷ್ಣ
Published 14 ಫೆಬ್ರುವರಿ 2026, 7:48 IST
Last Updated 14 ಫೆಬ್ರುವರಿ 2026, 7:48 IST
ಡ್ರೋನ್‌ಗಳು ಮೂಡಿಸಿದ ಶ್ರೀಕೃಷ್ಣದೇವರಾಯ  –ಪ್ರಜಾವಾಣಿ ಚಿತ್ರ/ ಲವ ಕೆ.
ಡ್ರೋನ್‌ಗಳು ಮೂಡಿಸಿದ ಶ್ರೀಕೃಷ್ಣದೇವರಾಯ  –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ (ವಿಜಯನಗರ): ಹಂಪಿ ಎಂದರೆ ಅದು ಜಗತ್ತನ್ನೇ ನಿಬ್ಬೆರಗಾಗಿಸಿದ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಅಂತಹ ನೆಲದಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿಂಬಿಸಿದ ಡ್ರೋನ್‌ಗಳ ಚಾಕಚಕ್ಯತೆಯನ್ನು ಕಂಡು ನಿಬ್ಬೆರಗಾಗುವ ಸರದಿ ಸಾವಿರಾರು ಜನರದ್ದಾಯಿತು. ಬಹುತೇಕ ಎಲ್ಲ ಮೊಬೈಲ್‌ಗಳು ಆಗಸದತ್ತ ಮುಖ ಮಾಡಿದ್ದವು. 

ಹಂ‍ಪಿ ಉತ್ಸವದ 39 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಳವಡಿಸಲಾದ ಡ್ರೊನ್ ಶೋ ನಿಜಕ್ಕೂ ಎಲ್ಲರನ್ನೂ ಬೆರಗಾಗಿಸಿತು. ತಂತ್ರಜ್ಞಾನವನ್ನು ಈ ರೀತಿಯಲ್ಲೂ ಬಳಸಿಕೊಳ್ಳಬಹುದಲ್ಲ ಎಂಬ ಆಲೋಚನೆಯನ್ನು ಸಾವಿರಾರು ಮನಗಳಲ್ಲಿ ಮೂಡಸಿತು.

ದೆಹಲಿಯ ಎ.ಐ.ಆರ್. ಪಿಕ್ಸಲ್ ಕಂಪನಿಯ ತಂತ್ರಜ್ಞರು ಸುಮಾರು 1,000 ಡ್ರೋನ್‌ಗಳನ್ನು ಎಂ.ಪಿ.ಪ್ರಕಾಶ್ ವೇದಿಕೆಯ ಪಕ್ಕದಲ್ಲೇ ಅಳವಡಿಸಿದ್ದರು. ರಾತ್ರಿ 8.47ಕ್ಕೆ ಸರಿಯಾಗಿ ಪ್ರಧಾನ ವೇದಿಕೆ ಹಾಗೂ ಸುತ್ತಮುತ್ತಲಿನ ಎಲ್ಲ ದೀಪಗಳೂ ಆರಿದವು. ಆಗ ಮಿಂಚು ಹುಳಗಳಂತೆ ಡ್ರೋನ್‌ಗಳು ಮೇಲೆದ್ದು ಸಭಿಕರ ತಲೆಮೇಲೆಯೇ ಹಾರಾಟ ನಡೆಸಿದವು. ಸರಿಯಾಗಿ 9 ಗಂಟೆಗೆ ಶೋ ಮುಗಿದಿತ್ತು. ಆ ಮೂಲಕ 13 ನಿಮಿಷ ಕಾಲ ಶೋ ಪ್ರದರ್ಶನ ನಡೆದಂತಾಯಿತು.

ADVERTISEMENT

ಡ್ರೋನ್‌ಗಳು ಮೊದಲಿಗೆ ಕನ್ನಡ ನಾಡನ್ನು ಆಗಸದಲ್ಲಿ ಮೂಡಿಸಿದ ಬಳಿಕ ವಿಜಯನಗರ ಸಾಮ್ರಾಜ್ಯದ ವೈಭವದ ಕತೆ ಹೇಳುವಂತೆ ವಿವಿಧ ದೃಶ್ಯಗಳನ್ನು ಮೂಡಿಸಿದವು. ಹಂಪಿಯ ಪ್ರಸಿದ್ಧ ಕಲ್ಲಿನ ರಥ, ಭವ್ಯವಾದ ವಿರೂಪಾಕ್ಷ ದೇವಾಲಯ ಮತ್ತು ರೌದ್ರಾವತಾರದಲ್ಲಿರುವ ಉಗ್ರ ನರಸಿಂಹನ ಮೂರ್ತಿಗಳನ್ನು ಕಲಾತ್ಮಕವಾಗಿ ಬಿಂಬಿಸಿದವು. ವಿಜಯನಗರ ಸಾಮ್ರಾಜ್ಯವನ್ನು ಜಗತ್ತಿಗೆ ಪರಿಚಯಿಸಿದ ಅಪ್ರತಿಮ ವೀರ, ಕನ್ನಡಿಗರ ಹೆಮ್ಮೆಯ ಸಾಮ್ರಾಟ ಶ್ರೀ ಕೃಷ್ಣದೇವರಾಯರ ಭಾವಚಿತ್ರವು ಆಕಾಶದಲ್ಲಿ ಮೂಡಿಬಂದಾಗ ಜನರಿಂದ ಹರ್ಷೋದ್ಗಾರ ಮೊಳಗಿತು. ಇದರೊಂದಿಗೆ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಹಂಪಿಯ ದರೋಜಿ ಕರಡಿ ಧಾಮ ಮತ್ತು ಬಡವಿ ಲಿಂಗದ ಚಿತ್ರಣಗಳು ಪ್ರದರ್ಶನದ ಮೆರುಗನ್ನು ಹೆಚ್ಚಿಸಿದವು.

ಪ್ರದರ್ಶನವು ಕೇವಲ ಇತಿಹಾಸಕ್ಕೆ ಸೀಮಿತವಾಗದೆ, ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಾದ ಶಕ್ತಿ ಮತ್ತು ಅನ್ನಭಾಗ್ಯ ಸೇರಿದಂತೆ ಪಂಚ ಯೋಜನೆಗಳ ಕುರಿತು ಮಾಹಿತಿಯನ್ನು ಸ್ಫುಟವಾಗಿ ಪ್ರದರ್ಶಿಸಿತು. ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ವ  ಸಚಿವರಾದ ಎಚ್.ಕೆ.ಪಾಟೀಲ್, ಶಿವರಾಜ ತಂಗಡಗಿ, ಜಮೀರ್ ಅಹಮ್ಮದ್ ಖಾನ್, ಶಾಸಕ ಎಚ್.ಆರ್.ಗವಿಯಪ್ಪ, ನಟ ದಿವಂಗತ ಪುನೀತ್‌ರಾಜ್ ಕುಮಾರ್ ಚಿತ್ರಗಳನ್ನು ಮೂಡಿಸಿದವು. ಶನಿವಾರ ಮತ್ತು ಭಾನುವಾರ ಸಹ ಈ ಡ್ರೋನ್ ಪ್ರದರ್ಶನ ಇರಲಿದೆ.

ಡ್ರೋನ್‌ಗಳು ಮೂಡಿಸಿದ ಉಗ್ರನರಸಿಂಹದ ಬಿಂಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.