ಹೊಸಪೇಟೆ (ವಿಜಯನಗರ): ಪ್ರತಿಯೊಬ್ವರೂ ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಲೇಬೇಕು, ಇನ್ನೊಂದು ವಾರ ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು, ಬಳಿಕ ಕಡ್ಡಾಯಗೊಳಿಸುತ್ತಿದ್ದು, ನಿಯಮ ಉಲ್ಲಂಘಿಸಿದವರು ದಂಡ ಪಾವತಿಸಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಹೇಳಿದರು.
ಇಲ್ಲಿ ಮಂಗಳವಾರ ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾತನಾಡಿದ ಅವರು, ಕಳೆದ ಹತ್ತು ದಿನಗಳಿಂದ ಹೆಲ್ಮೆಟ್ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ, ಇನ್ನೂ ಒಂದು ವಾರ ಈ ಜಾಗೃತಿ ಕಾರ್ಯಕ್ರಮ ಮುಂದುವರಿಯಲಿದೆ, ಬಳಿಕ ಕಟ್ಟುನಿಟ್ಟಾಗಿ ನಿಯಮ ಜಾರಿಗೆ ತರಲಾಗುತ್ತಿದೆ ಎಂದರು.
ದ್ವಿಚಕ್ರ ವಾಹನದಲ್ಲಿ ಮೂವರು, ಅದಕ್ಕಿಂತ ಹೆಚ್ಚು ಮಂದಿ ಸಂಚರಿಸುತ್ತಿರುವುದು ಬಹಳಷ್ಟು ಕಂಡುಬಂದಿದೆ, ಸರ್ವಿಸ್ ಆಟೊದಲ್ಲಿ ಲೆಕ್ಕಕ್ಕಿಂತ ಅಧಿಕ ಮಂದಿಯನ್ನು ಕೂರಿಸಿಕೊಂಡು ಹೋಗುತ್ತಿರುವುದು ಸಹ ಗಮನಕ್ಕೆ ಬಂದಿದೆ. ಇನ್ನು ಮುಂದೆ ಇದೆಲ್ಲದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದರು.
ಭಂಡ ಧೈರ್ಯ ಬೇಡ: ‘ರಸ್ತೆ ಅಪಘಾತ ಆಗುವುದಿಲ್ಲ, ನಾನು ಗಾಡಿ ಚೆನ್ನಾಗಿ ಓಡಿಸುತ್ತೇನೆ, ನನಗೆ ಯಾವ ಭಯವೂ ಇಲ್ಲ ಎಂಬ ಭಂಡ ಧೈರ್ಯ ಯಾರಿಗೂ ಬೇಡ, ಮುಂದಿನ ರಸ್ತೆಯಲ್ಲಿ, ಸರ್ಕಲ್‌ನಲ್ಲಿ ಎಂತಹ ಅನಾಹುತ ಕಾದಿದೆ ಎಂಬುದನ್ನು ಹೇಳಲು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಹೆಲ್ಮೆಟ್ ಧರಿಸುವುದನ್ನು ರೂಢಿ ಮಾಡಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
ಜಾಥಾ: ವಡಕರಾಯ ದೇವಸ್ಥಾನದ ಬಳಿಯಿಂದ ಆರಂಭವಾದ ಹೆಲ್ಮೆಟ್ ಜಾಗೃತಿ ಜಾಥಾವು ದೊಡ್ಡ ಮಸೀದಿ, ಗಾಂಧಿ ಚೌಕ, ಬಸ್ ನಿಲ್ದಾಣ, ಕನಕದಾಸ ವೃತ್ತ, ಪಟೇಲ್ ನಗರ, ಪುನೀತ್ ರಾಜ್‌ಕುಮಾರ್ ವೃತ್ತ, ಅಂಬೇಡ್ಕರ್ ವೃತ್ತ, ಕಾಲೇಜು ರಸ್ತೆ, ಬಸವೇಶ್ವರ ವೃತ್ತ, ಸಾಯಿಬಾಬಾ ವೃತ್ತ, ಎಪಿಎಂಸಿ ವೃತ್ತ, ಟಿ.ಬಿ.ಡ್ಯಾಂ ರಸ್ತೆ, ವಾಲ್ಮೀಕಿ ವೃತ್ತ ಮೂಲಕ ಟೌನ್ ಪೊಲೀಸ್ ಠಾಣೆಗೆ ಬಂತು. ಪ್ರಮುಖ ವೃತ್ತಗಳಲ್ಲಿ ಹಾಗೂ ರಸ್ತೆಗಳಲ್ಲಿ ಸ್ವಲ್ಪ ಹೊತ್ತು ಬೈಕ್ ನಿಲ್ಲಿಸಿದ ಪೊಲೀಸರು ಧ್ವನಿವರ್ಧಕ ಮೂಲಕ ಹೆಲ್ಮೆಟ್ ಕಡ್ಡಾಯದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಡಿವೈಎಸ್‌ಪಿ ಟಿ.ಮಂಜುನಾಥ್, ಟ್ರಾಫಿಕ್ ಇನ್‌ಸ್ಪೆಕ್ಟರ್ ಹುಲುಗಪ್ಪ, ಹಲವು ಇನ್‌ಸ್ಪೆಕ್ಟರ್‌ಗಳು, ಇತರ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಉತ್ತಮ ಗುಣಮಟ್ಟದ ಹೆಲ್ಮೆಟ್ ಖರೀದಿಸಿ ಹೆಲ್ಮೆಟ್ ಕೈಯಲ್ಲಿ ಹಿಡಿದು ಸಾಗುವುದು ಸಲ್ಲ ಕಾರುಗಳಲ್ಲಿ ಸೀಟ್‌ಬೆಲ್ಟ್ ಹಾಕುವುದು ಸಹ ಕಡ್ಡಾಯ
ಸಂಚಾರ ನಿಯಮಗಳು ಹೆಲ್ಮೆಟ್ ಕಡ್ಡಾಯ ಎಲ್ಲ ಇರುವುದು ಜನರ ಸುರಕ್ಷತೆಗಾಗಿಯೇ ಹೊರತು ಪೊಲೀಸರಿಗಾಗಿ ಅಲ್ಲ ಹೀಗಾಗಿ ಜನರು ನಿಯಮ ಪಾಲಿಸಲೇಬೇಕುಎಸ್.ಜಾಹ್ನವಿ ಎಸ್‌ಪಿ
ಮಹಿಳಾ ಠಾಣೆ ಶೀಘ್ರ ನಗರದ ಅಂಬೇಡ್ಕರ್ ಭವನ ಪಕ್ಕದಲ್ಲಿ ಮಹಿಳಾ ಪೊಲೀಸ್ ಠಾಣೆಗೆ ಜಾಗ ಗುರುತಿಸಲಾಗಿದೆ. ಶೀಘ್ರ ಠಾಣೆಯ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಎಸ್‌ಪಿ ಅವರು ಮಾಧ್ಯಮದವರಿಗೆ ತಿಳಿಸಿದರು. ಮನೆ ಮನೆಗೆ ಪೊಲೀಸ್ ಅಭಿಯಾನದಲ್ಲಿ ಮಹಿಳಾ ಪೊಲೀಸರನ್ನೂ ಸೇರಿಸಿಕೊಂಡರೆ ಮಾತ್ರ ಮನೆಗಳಲ್ಲಿ ಜನರು ತಮ್ಮ ಕಷ್ಟ ಹೇಳಿಕೊಳ್ಳಲು ಮುಂದೆ ಬರುತ್ತಾರೆ ಎಂಬ ಸಲಹೆ ಬಂದಿದ್ದು ಅದನ್ನು ಪರಿಶೀಲಿಸುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.