
ಹೊಸಪೇಟೆ (ವಿಜಯನಗರ): ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸಲು ನನ್ನ ವಿರೋಧವಿಲ್ಲ. ಆದರೆ, ಹೆಚ್ಚುವರಿ ಮೀಸಲಾತಿಯನ್ನೂ ಜತೆಗೆ ತಂದರೆ ಹಂಚಿಕೊಂಡು ಬದುಕಬಹುದು’ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು, ‘ನಮ್ಮ ತಟ್ಟೆಗೆ ಕೈ ಹಾಕದಂತೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಸಿ.ಎಂ ಅವರಿಗೂ ಮನವರಿಕೆ ಆಗಿದೆ. ಕುರುಬ ಸಮುದಾಯವನ್ನು ಸೇರಿಸುವ ಇಚ್ಛೆಯಿದ್ದರೆ, ಮೀಸಲು ಪ್ರಮಾಣ ಹೆಚ್ಚಿಸಲಿ’ ಎಂದರು.
‘ಕುರುಬ ಸಮುದಾಯ ಎಸ್‌ಟಿಗೆ ಒಳಪಡುವುದೇ ಅಥವಾ ಇಲ್ಲವೇ ಎಂದು ಮೊದಲು ಕುಲಶಾಸ್ತ್ರೀಯ ಅಧ್ಯಯನ ಆಗಬೇಕು. ಗೊಲ್ಲ, ಬಸ್ತರು ಸಮಯದಾಯಗಳಲ್ಲೂ ಇದೇ ರೀತಿಯ ಅಧ್ಯಯನ ಆಗಬೇಕು. ಅದರ ಹೊರತಾಗಿ ಈಗಿನ ಸ್ಥಿತಿಯಲ್ಲೇ ಎಸ್‌ಟಿಗೆ ಸೇರಿಸುವ ಪ್ರಯತ್ನ ಒಳ್ಳೆಯದಲ್ಲ. ಕುಲಶಾಸ್ತ್ರೀಯ ಅಧ್ಯಯನ ನಡೆದು ಎಲ್ಲ ಅರ್ಹರನ್ನೂ ಎಸ್‌ಟಿಗೆ ಸೇರಿಸಬಹುದು, ಆದರೆ ಅದೇ ಪ್ರಕಾರ ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಬೇಕು’ ಎಂದರು.
ಇದನ್ನು ವಿರೋಧಿಸಿದ ವಾಲ್ಮೀಕಿ ನಾಯಕ ಸಮಾಜದ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ್, ‘ಎಸ್‌ಟಿ ಮೀಸಲಾತಿ ಪಾಲನ್ನು ಹೆಚ್ಚಿಸಿ ಕುರುಬ ಸಮುದಾಯದವರನ್ನು ಎಸ್‌ಟಿಗೆ ಸೇರಿಸಿದರೆ, ನಮ್ಮ ಸಮಾಜಕ್ಕೆ ರಾಜಕೀಯವಾಗಿ ಅನ್ಯಾಯ ಆಗುತ್ತದೆ. ಈ ಪ್ರಸ್ತಾವವನ್ನು ಒಪ್ಪಿಕೊಳ್ಳಲಾಗದು. ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವುದು ಮಾತ್ರ ಬೇಡ’ ಎಂದರು. ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.