ADVERTISEMENT

ಹರಿಜನ ಕೇರಿಯಲ್ಲಿ ಬಿಡಾಡಿ ದನಗಳ ದರ್ಬಾರ್‌

ಬಡಾವಣೆಯಲ್ಲೊಂದು ಸುತ್ತು ಅಂಕಣಕ್ಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 10:34 IST
Last Updated 23 ಫೆಬ್ರುವರಿ 2021, 10:34 IST
ಹರಿಜನಕೇರಿಯ ಮುಖ್ಯರಸ್ತೆಗೆ ಹೊಂದಿಕೊಂಡಂತೆ ತ್ಯಾಜ್ಯದ ರಾಶಿ ಬಿದ್ದಿದ್ದು, ಅದರಲ್ಲಿನ ಕೊಳೆತ ವಸ್ತು ತಿನ್ನುತ್ತಿರುವ ಬಿಡಾಡಿ ದನಗಳು
ಹರಿಜನಕೇರಿಯ ಮುಖ್ಯರಸ್ತೆಗೆ ಹೊಂದಿಕೊಂಡಂತೆ ತ್ಯಾಜ್ಯದ ರಾಶಿ ಬಿದ್ದಿದ್ದು, ಅದರಲ್ಲಿನ ಕೊಳೆತ ವಸ್ತು ತಿನ್ನುತ್ತಿರುವ ಬಿಡಾಡಿ ದನಗಳು   

ವಿಜಯನಗರ (ಹೊಸಪೇಟೆ): ನಗರದ ಹರಿಜನ ಕೇರಿಯಲ್ಲಿ ಬಿಡಾಡಿ ದನಗಳು, ಬೀದಿ ನಾಯಿಗಳ ಹಾವಳಿಯಿಂದ ಸ್ಥಳೀಯರು ಬೇಸತ್ತಿದ್ದಾರೆ.

ಇಲ್ಲಿನ ಬಡಾವಣೆಗಳಿಗೆ ನಗರಸಭೆಯ ಕಸ ಸಂಗ್ರಹಿಸುವ ವಾಹನಗಳು ನಿತ್ಯ ಬರುತ್ತವೆ. ಆದರೂ, ಜನರಿಗೆ ರಸ್ತೆ ಬದಿ ತ್ಯಾಜ್ಯ ಸುರಿಯುವುದೇ ಇಷ್ಟ!

ಬಡಾವಣೆಯ ನಾಲ್ಕೈದು ಕಡೆಗಳಲ್ಲಿ ಕಸದ ರಾಶಿ ಬಿದ್ದಿರುತ್ತದೆ. ತ್ಯಾಜ್ಯಕ್ಕೆ ಆಕರ್ಷಿತವಾಗಿ ಬೀದಿ ನಾಯಿಗಳು, ಹಂದಿಗಳು, ಬಿಡಾಡಿ ದನಗಳು ಬರುತ್ತವೆ. ಅವುಗಳು ತ್ಯಾಜ್ಯದಲ್ಲಿರುವ ವಸ್ತುಗಳನ್ನು ತಿಂದು, ಮನಬಂದಂತೆ ಚೆಲ್ಲಾಪಿಲ್ಲಿ ಮಾಡಿ ಹೋಗುವುದರಿಂದ ಅದು ಎಲ್ಲೆಡೆ ಹರಡಿ, ದುರ್ಗಂಧಕ್ಕೆ ಕಾರಣವಾಗುತ್ತಿದೆ.

ADVERTISEMENT

ಇನ್ನು, ಸಾರ್ವಜನಿಕ ಶೌಚಾಲಯಗಳಿಲ್ಲ. ಜನ ಕಟ್ಟಡಗಳಿಗೆ ಮರೆಯಾಗಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಾರೆ. ಅದು ರಸ್ತೆಯೆಲ್ಲ ಹರಡಿ ಗಬ್ಬು ಹರಡುತ್ತದೆ. ಮೊದಲಿನಿಂದಲೂ ಇಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚು. ಮಕ್ಕಳಿಗೆ ಮನೆಯ ಹೊರಗೆ ಬಿಡಲು ಪೋಷಕರು ಹೆದರುತ್ತಾರೆ. ದ್ವಿಚಕ್ರ ವಾಹನ ಸವಾರರು ಹಾದು ಹೋದರೆ ಅವರ ಮೇಲೆ ಎರಗಿ ಬೀಳುತ್ತವೆ. ರಾತ್ರಿ ವೇಳೆಯಲ್ಲಂತೂ ಬಡಾವಣೆಯಲ್ಲಿ ಬೀದಿ ನಾಯಿಗಳನ್ನು ತಪ್ಪಿಸಿಕೊಂಡು ಓಡಾಡುವುದು ಕಷ್ಟವಾಗಿದೆ. ಬಿಡಾಡಿ ದನಗಳು ರಸ್ತೆಯ ಮಧ್ಯದಲ್ಲೇ ಠಿಕಾಣಿ ಹೂಡುವುದರಿಂದ ಅಪಘಾತಗಳಿಗೂ ಕಾರಣವಾಗುತ್ತಿದೆ.

ತ್ಯಾಜ್ಯದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಗರಸಭೆ ಕ್ರಮ ಕೈಗೊಂಡಿದೆ. ಆದರೆ, ಬಡಾವಣೆಯ ಜನರ ಸಹಕಾರ ಸಿಗುತ್ತಿಲ್ಲ. ಮನೆ, ದೇವಸ್ಥಾನ, ಶಾಲೆಯವರು ತ್ಯಾಜ್ಯವನ್ನು ರಸ್ತೆ ಬದಿ ಸುರಿದು ಹೋಗುತ್ತಾರೆ. ಯಾವ ಮನೆಯ ಬಳಿ ಕಸ ಎಸೆದು ಹೋಗುತ್ತಾರೋ ಅವರಿಗೆ ದುರ್ಗಂಧದಿಂದ ಕಿರಿಕಿರಿ ಉಂಟಾಗುತ್ತಿದೆ. ಆದರೆ, ಜನರಿಗೆ ಅವರ ಸಮಸ್ಯೆ ಬೇಕಿಲ್ಲ.

***

ಜನರ ಸಹಕಾರ ಇದ್ದರಷ್ಟೇ ಸಮರ್ಪಕವಾಗಿ ಕಸ ವಿಲೇವಾರಿ ಮಾಡಲು ಸಾಧ್ಯ. ಸಾರ್ವಜನಿಕರು ನಗರಸಭೆಗೆ ಸಹಕಾರ ಕೊಡುವುದು ಅವರ ಕರ್ತವ್ಯ.
–ಮನ್ಸೂರ್‌ ಅಲಿ, ಪೌರಾಯುಕ್ತ, ನಗರಸಭೆ

***

ಎಷ್ಟೇ ಮನವಿ ಮಾಡಿದರೂ ಸಾರ್ವಜನಿಕರು ರಸ್ತೆಬದಿಯಲ್ಲೇ ಕಸ ಎಸೆದು ಹೋಗುತ್ತಾರೆ. ಒಮ್ಮೊಮ್ಮೆ ಸತ್ತ ಪ್ರಾಣಿಗಳನ್ನು ಹಾಕುತ್ತಾರೆ.
–ಆಕಾಶ, ಸ್ಥಳೀಯ ನಿವಾಸಿ

****

ಟ್ರಾನ್ಸಫಾರ್ಮರ್‌ ಬಳಿಯೇ ತ್ಯಾಜ್ಯದ ರಾಶಿ ಬೀಳುತ್ತದೆ. ಅಲ್ಲಿ ಸಂಗ್ರಹವಾಗುವ ಕಸ ನಗರಸಭೆಯವರು ವಿಲೇವಾರಿ ಮಾಡಬಾರದು. ಜನ ಹಾಗಾದರೂ ಬುದ್ದಿ ಕಲಿಯಬಹುದು.
-ನಾರಾಯಣ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.