ADVERTISEMENT

ವಿಜಯನಗರ: ಫೆಲೋಶಿಪ್‌ ಬಿಡುಗಡೆ ಭರವಸೆ, ಧರಣಿ ಹಿಂಪಡೆದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 15:10 IST
Last Updated 17 ನವೆಂಬರ್ 2021, 15:10 IST
ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಮಾತುಕತೆ ನಡೆಸಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಮಾತುಕತೆ ನಡೆಸಿದರು.    

ಹೊಸಪೇಟೆ (ವಿಜಯನಗರ): ‘ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಫೆಲೋಶಿಪ್‌ ಬಿಡುಗಡೆಗೆ ಕ್ರಮ ಜರುಗಿಸಲಾಗುವುದು’ ಎಂದು ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರು ಭರವಸೆ ಕೊಟ್ಟಿದ್ದರಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎರಡು ದಿನಗಳಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಬುಧವಾರ ಸಂಜೆ ಕೊನೆಗೊಳಿಸಿದ್ದಾರೆ.

‘ಫೆಲೋಶಿಪ್‌ ಕೊಡಿ, ಇಲ್ಲವೇ ವಿಷ ಕೊಡಿ’ ಎಂಬ ಘೋಷಣೆಯೊಂದಿಗೆ ಶಿಷ್ಯವೇತನ ಬಿಡುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದ್ದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತಿದ್ದರು. ಮಂಗಳವಾರ ಸಂಜೆಯಿಂದ ಬುಧವಾರ ಬೆಳಗಿನ ಜಾವದ ವರೆಗೆ ಸುರಿವ ಮಳೆ ಲೆಕ್ಕಿಸದೆ ಧರಣಿ ನಡೆಸಿದ್ದರು. ಯಾರೊಬ್ಬರೂ ಅವರ ಗೋಳು ಕೇಳಿಸಿಕೊಳ್ಳದ ಕಾರಣ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬುಧವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಅವರನ್ನು ಪೊಲೀಸರು ತಡೆಯಲೆತ್ನಿಸಿದಾಗ ಮಾತಿನ ಚಕಮಕಿ ನಡೆಯಿತು.

ಬಳಿಕ ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಅವರು, ವಿದ್ಯಾರ್ಥಿಗಳನ್ನು ಒಳಭಾಗದಲ್ಲಿ ಕರೆಸಿಕೊಂಡು ಅವರ ಮನವಿ ಆಲಿಸಿದರು. ‘ವಿಶ್ವವಿದ್ಯಾಲಯ ಸ್ವಾಯತ್ತ ಸಂಸ್ಥೆಯಾಗಿದೆ. ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರುವುದಿಲ್ಲ. ನಿಮ್ಮ ಮನವಿ ಸರ್ಕಾರದ ಗಮನಕ್ಕೆ ತರಲಾಗುವುದು. ವಿಶ್ವವಿದ್ಯಾಲಯದ ಕುಲಸಚಿವರು ಬರುತ್ತಾರೆ’ ಎಂದು ಹೇಳಿದರು.

ಅಷ್ಟರಲ್ಲಿ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರು ಸ್ಥಳಕ್ಕೆ ಬಂದು, ‘2018–19ನೇ ಸಾಲಿನ ಎಸ್‌ಸಿಪಿ/ಟಿಎಸ್‌ಪಿ ವಾರ್ಷಿಕ ಅನುದಾನ ₹12.5 ಲಕ್ಷ ಇದ್ದು, ಅದನ್ನು ಎಲ್ಲ ವಿದ್ಯಾರ್ಥಿಗಳಿಗೆ ತಕ್ಷಣವೇ ಬಿಡುಗಡೆಗೊಳಿಸಲಾಗುವುದು. ಪಿಎಚ್‌.ಡಿ ಪ್ರವೇಶದ ಸಂದರ್ಭದಲ್ಲಿ ಫೆಲೋಶಿಪ್‌ಗೆ ಬೇಡಿಕೆ ಇಡುವುದಿಲ್ಲ ಎಂದು ಬರೆಸಿಕೊಂಡಿದ್ದ ಬಾಂಡ್‌ ರದ್ದುಪಡಿಸಲಾಗುವುದು. ಮಹಿಳೆಯರ ಹಾಸ್ಟೆಲ್‌ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಸೇರಿಸಲು ಕ್ರಮ ಜರುಗಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ಪೋರ್ಟಲ್‌ ಮೂಲಕವೇ ಫೆಲೋಶಿಪ್‌ ಪಾವತಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿ ಮುಖಂಡ ದೊಡ್ಡ ಬಸವರಾಜ, ‘ನಿಮ್ಮ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯಲಾಗುತ್ತಿದೆ. ಒಂದು ವಾರದೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಪುನಃ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಮುನ್ನ ಇಬ್ಬರು ವಿದ್ಯಾರ್ಥಿಗಳೊಂದಿಗೆ ಬೇಡಿಕೆ ಕುರಿತು ಚರ್ಚಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳು ಆಹ್ವಾನ ನೀಡಿದರು. ಅದನ್ನು ತಿರಸ್ಕರಿಸಿದ ವಿದ್ಯಾರ್ಥಿಗಳು, ‘ಏನೇ ಇದ್ದರೂ ಧರಣಿ ಸ್ಥಳದಲ್ಲೇ ಮಾತನಾಡಬೇಕು’ ಎಂದು ಹೇಳಿದರು.

ಪ್ರಜ್ಞೆ ತಪ್ಪಿ ಬಿದ್ದ ವಿದ್ಯಾರ್ಥಿ: ಆಸ್ಪತ್ರೆಗೆ ದಾಖಲು
ಧರಣಿ ನಿರತ ಅಂಜಿನಪ್ಪ ಗಡೇದ್‌ ಎಂಬ ಸಂಶೋಧನಾ ವಿದ್ಯಾರ್ಥಿ ಬುಧವಾರ ಸಂಜೆ ಪ್ರಜ್ಞೆ ತಪ್ಪಿ ಬಿದ್ದದ್ದರಿಂದ ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು.

ಜ್ವರದಿಂದ ಬಳಲುತ್ತಿದ್ದ ಸಂಶೋಧನಾ ವಿದ್ಯಾರ್ಥಿಗಳಾದ ಬಸವರಾಜ, ರಾಜೇಶ, ಪಂಪಾಪತಿ, ವಿದ್ಯಾ, ಶಿಲ್ಪಾ ಅವರಿಗೂ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ‘ವಿದ್ಯಾರ್ಥಿಗಳು ಎರಡು ದಿನ ಮಳೆಯಲ್ಲೇ ಧರಣಿ ನಡೆಸಿದ್ದಾರೆ. ಅಂಜಿನಪ್ಪ ಸರಿಯಾಗಿ ಆಹಾರ ಸೇವಿಸಿರಲಿಲ್ಲ. ಆರೋಗ್ಯದಲ್ಲಿ ಏರುಪೇರಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಯಾರಿಗೂ ಯಾವುದೇ ಅಪಾಯವಿಲ್ಲ’ ಎಂದು ವೈದ್ಯರು ತಿಳಿಸಿದ್ದಾರೆ.

*
ವಿದ್ಯಾರ್ಥಿಗಳು ಕ್ರಿಮಿನಲ್‌ಗಳಲ್ಲ. ಕುಲಪತಿ, ವಿಶ್ವವಿದ್ಯಾಲಯದ ಆಡಳಿತದಿಂದ ತಪ್ಪುಗಳಾಗಿದ್ದರೆ ಉನ್ನತ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುತ್ತದೆ.
–ಅನಿರುದ್ಧ್‌ ಪಿ. ಶ್ರವಣ್‌, ಜಿಲ್ಲಾಧಿಕಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.