ವಿಜಯಪುರ: ಜಿಲ್ಲೆಯ ಮುಕ್ತ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಬೆಲೆಯು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನಿಗದಿಪಡಿಸಿರುವ ದರಕ್ಕಿಂತಲೂ ಕಡಿಮೆ ಇದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ 2024-25ನೇ ಹಿಂಗಾರು ಹಂಗಾಮಿನಲ್ಲಿ 84.11 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬಿತ್ತನೆಯಾಗಿದ್ದು, 2,840 ಕ್ವಿಂಟಲ್ ಇಳುವರಿ ಅಂದಾಜಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಪ್ರತಿ ಕ್ವಿಂಟಲ್‌ಗೆ ₹5,700ರಿಂದ ₹5,800ರ ವರೆಗೆ ಮಾರಾಟವಾಗುತ್ತಿದೆ.
ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಎಫ್‍ಎಕ್ಯೂ ಗುಣಮಟ್ಟದ ಕ್ವಿಂಟಲ್ ಸೂರ್ಯಕಾಂತಿಗೆ ₹7,280 ದರ ನಿಗದಿಪಡಿಸಿದೆ.
ಜಿಲ್ಲಾ ಕಾರ್ಯಪಡೆ ಸಮಿತಿಯು ಕೆಓಎಫ್ ಸಂಸ್ಥೆಯ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳನ್ನು ಖರೀದಿ ಕೇಂದ್ರಗಳೆಂದು ಪರಿಗಣಿಸಿದ್ದು, ರೈತರ ಹೆಸರು ನೋಂದಣಿಯೊಂದಿಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಜಿಲ್ಲೆಯ ಬಬಲೇಶ್ವರ, ಸವನಹಳ್ಳಿ, ಬೆಳ್ಳುಬ್ಬಿ, ತಾಜಪುರ, ವಿಜಯಪುರ, ತಂಗಡಗಿ, ಚಡಚಣ, ಹಲಸಂಗಿ, ಸಿಂದಗಿ ಹಾಗೂ ಬಸವನಬಾಗೇವಾಡಿಯಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಪ್ರತಿ ರೈತರಿಂದ ಎಕರೆಗೆ ಗರಿಷ್ಠ 4 ಕ್ವಿಂಟಲ್‍ನಂತೆ ಹಾಗೂ ಗರಿಷ್ಠ 20 ಕ್ವಿಂಟಲ್‌ನಷ್ಟು ಸೂರ್ಯಕಾಂತಿ ಖರೀದಿಸಲಾಗುತ್ತಿದೆ.
ಬಿತ್ತನೆ ಪ್ರದೇಶ ಕ್ಷೀಣ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಬೆಲೆ ಏರಿಳಿತದಿಂದಾಗಿ ಸೂರ್ಯಕಾಂತಿ ಬಿತ್ತನೆ ಪ್ರದೇಶವೂ ಕ್ರಮೇಣ ಕಡಿಮೆಯಾಗುತ್ತಿದೆ.
ಜಿಲ್ಲೆಯಲ್ಲಿ ಮುಂಗಾರಿನಡಿ 4,636 ಹೆಕ್ಟೇರ್, ಹಿಂಗಾರಿನಲ್ಲಿ 422 ಹೆಕ್ಟೇರ್ ಮತ್ತು ಬೇಸಿಗೆಯಲ್ಲಿ 543 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ.
‘ಪ್ರತಿ ಹೆಕ್ಟೇರ್‌ಗೆ 8.7 ಕ್ವಿಂಟಲ್‌ನಷ್ಟು ಇಳುವರಿ ಇದೆ. ಜಿಲ್ಲೆಯಲ್ಲಿ ವಾರ್ಷಿಕ 47 ಸಾವಿರ ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗುತ್ತಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್ ತಿಳಿಸಿದರು.
ಕೊಟ್ಟೂರು ಎಪಿಎಂಸಿಯಲ್ಲಿ ಏಪ್ರಿಲ್‌ನಲ್ಲಿ ಕ್ವಿಂಟಲ್‌ಗೆ ₹7,229 ಇದ್ದ ಧಾರಣೆಯು, ಈಗ ₹7,779ಕ್ಕೆ ಮುಟ್ಟಿದೆ.
‘ಹಲವು ವರ್ಷಗಳ ಹಿಂದೆ ಸೂರ್ಯಕಾಂತಿ ಬೆಳೆಯಲು ರೈತರು ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಕೂಲಿ ಕಾರ್ಮಿಕರ ಕೊರತೆ ಕಂಡು ಬರುತ್ತಿರಲಿಲ್ಲ. ಬದಲಾದ ಕಾಲಘಟ್ಟದಲ್ಲಿ ಕಾರ್ಮಿಕರ ಕೊರತೆ ಆಗುತ್ತಿದೆ’ ಎಂದು ಹರಪನಹಳ್ಳಿ ತಾಲ್ಲೂಕು ಚಿಗಟೇರಿಯ ಕೃಷಿಕ ಎಸ್.ಎಸ್. ಬಸವನಗೌಡ ಹೇಳಿದರು.
‘ರೋಹಿಣಿ ಮಳೆ ಹೆಚ್ಚು ಸುರಿದರೆ ಬೆಳೆಗೆ ಹಾನಿಯಾಗುವ ಭಯದಿಂದ ಹೆಚ್ಚಿನ ರೈತರು ಸೂರ್ಯಕಾಂತಿಗೆ ಒಲವು ತೋರಿಸುತ್ತಿಲ್ಲ. ಇಳುವರಿ ಬಂದಾಗ ವ್ಯಾಪಾರಸ್ಥರು ಬೇಕಾಬಿಟ್ಟಿ ಬೆಲೆಗೆ ಕೇಳುತ್ತಾರೆ. ಹಾಗಾಗಿ, ಸೂರ್ಯಕಾಂತಿ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ’ ಎಂದರು.
ಗದಗ: ಖರೀದಿ ಕೇಂದ್ರ ವಿಳಂಬ
ಗದಗ: ಜಿಲ್ಲೆಯ ನರಗುಂದ ತಾಲ್ಲೂಕು ಮಲಪ್ರಭಾ ಹೊಳೆ, ಕಾಲುವೆ ಆಶ್ರಿತ ಅರೆನೀರಾವರಿ ಪ್ರದೇಶವಾಗಿದೆ. ಈ ಭಾಗದಲ್ಲಿ ಅಲ್ಪಮಟ್ಟಿಗೆ ಸೂರ್ಯಕಾಂತಿ ಬೆಳೆಯಲಾಗಿದೆ.
ಈ ವರ್ಷ ಹಿಂಗಾರು ಅವಧಿಯಲ್ಲಿ ಶೇ 60ರಷ್ಟು ರೈತರು ಸೂರ್ಯಕಾಂತಿ ಬೆಳೆದಿದ್ದಾರೆ. ಆದರೆ, ಬೆಲೆ ಇಳಿಕೆಯಿಂದಾಗಿ ಪರದಾಡುತ್ತಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹5 ಸಾವಿರದಿಂದ ₹6 ಸಾವಿರ ದರವಿದೆ. ಸರ್ಕಾರ ಖರೀದಿ ಕೇಂದ್ರ ಆರಂಭಿಸಲು ಆದೇಶಿಸಿದ್ದರೂ ಇನ್ನೂ ಆರಂಭವಾಗಿಲ್ಲ. ಆದರೆ, ಸೂರ್ಯಕಾಂತಿ ಬೆಳೆದ ಶೇ 80ರಷ್ಟು ರೈತರು ಈಗಾಗಲೇ ಮಾರಾಟ ಮಾಡಿದ್ದಾರೆ.
‘ಈಗಾಗಲೇ, ಕಡಿಮೆ ಬೆಲೆಗೆ ಸೂರ್ಯಕಾಂತಿ ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದೇವೆ. ಈಗ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸಲು ಆದೇಶ ಹೊರಡಿಸಿದರೆ ಪ್ರಯೋಜನ ಏನು? ಸರ್ಕಾರ ರೈತರ ಅನುಕೂಲಕ್ಕೆ ತಕ್ಕಂತೆ ಖರೀದಿ ಕೇಂದ್ರ ತೆರೆಯುವುದಿಲ್ಲ. ವಿಳಂಬ ಮಾಡುವ ಮೂಲಕ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿದೆ’ ಎಂದು ತಾಲ್ಲೂಕಿನ ಭೈರನಹಟ್ಟಿ ಗ್ರಾಮದ ರೈತ ಸಣ್ಣ ಶಿವಪ್ಪ ತೆಗ್ಗಿನಮನಿ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.