ADVERTISEMENT

ವಿಜಯನಗರ | ಸಿಬ್ಬಂದಿ ಕೊರತೆ: 2,106 ಮನೆಯಲ್ಲಷ್ಟೇ ಸಮೀಕ್ಷೆ

ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಆರಂಭವಾಗಿ ಮೂರು ದಿನ

ಎಂ.ಜಿ.ಬಾಲಕೃಷ್ಣ
Published 25 ಸೆಪ್ಟೆಂಬರ್ 2025, 2:36 IST
Last Updated 25 ಸೆಪ್ಟೆಂಬರ್ 2025, 2:36 IST
<div class="paragraphs"><p>ಹೊಸಪೇಟೆಯಲ್ಲಿ ಸಮೀಕ್ಷೆ ಉದ್ಘಾಟಿಸಿದ ಬಳಿಕ ಮೊದಲ ಮನೆಯಲ್ಲಿ ಮಾಹಿತಿ ಪಡೆಯಲಾಯಿತು</p></div>

ಹೊಸಪೇಟೆಯಲ್ಲಿ ಸಮೀಕ್ಷೆ ಉದ್ಘಾಟಿಸಿದ ಬಳಿಕ ಮೊದಲ ಮನೆಯಲ್ಲಿ ಮಾಹಿತಿ ಪಡೆಯಲಾಯಿತು

   

ಹೊಸಪೇಟೆ (ವಿಜಯನಗರ): ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭವಾಗಿ ಮೂರು ದಿನ ಕಳೆದಿದ್ದು, ಜಿಲ್ಲೆಯಲ್ಲಿ ಇದುವರೆಗೆ 2,106 ಮನೆಗಳಿಗೆ ಮಾತ್ರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಜಿಲ್ಲಾ ಕೇಂದ್ರ ಹೊಸಪೇಟೆ ಹಿಂದೆ ಉಳಿದಿದೆ.

‘ಸಿಬ್ಬಂದಿ ನಿಯೋಜನೆ ವಿಳಂಬವಾದ್ದರಿಂದ ಸಮೀಕ್ಷೆ ಸಮರ್ಪಕವಾಗಿ ಆರಂಭವಾಗಿಲ್ಲ. ಗುರುವಾರದಿಂದ ಸಮೀಕ್ಷೆ ವ್ಯವಸ್ಥಿತವಾಗಿ ಶುರುವಾಗುವ ನಿರೀಕ್ಷೆ ಇದೆ. ಉಳಿದ ತಾಲ್ಲೂಕುಗಳಲ್ಲಿ ಸಮೀಕ್ಷೆ ನಿಧಾನವಾಗಿ ವೇಗ ಪಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹೊಸಪೇಟೆಯಲ್ಲಿ ಸಿಬ್ಬಂದಿ ಕೊರತೆ ಕಾಡಿದ್ದರಿಂದ ಬೇರೆ ತಾಲ್ಲೂಕುಗಳಿಂದ ಸಿಬ್ಬಂದಿ ಕರೆಸಬೇಕಾಯಿತು. ಹೊಸಪೇಟೆಯಲ್ಲಿ ಮನೆಗಳ ಸಂಖ್ಯೆಯೂ ಜಾಸ್ತಿ ಇದೆ. ಹೀಗಾಗಿ, ಸಮರ್ಪಕವಾಗಿ ಸಿಬ್ಬಂದಿ ನಿಯೋಜಿಸಿಯೇ ಸಮೀಕ್ಷೆ ಆರಂಭಿಸಬೇಕಿದ್ದರಿಂದ ಸ್ವಲ್ಪ ವಿಳಂಬವಾಗಿದೆ. ತಾಂತ್ರಿಕ ಸಮಸ್ಯೆ ಕುರಿತು ಯಾರೂ ದೂರು ನೀಡಿಲ್ಲ’ ಎಂದು ಹೇಳಿದರು.

ಹಲವು ಸಮಸ್ಯೆ: ಮ್ಯಾಪಿಂಗ್, ಆ್ಯಪ್‌, ಸರ್ವರ್‌ ಸಮಸ್ಯೆಗಳ ಸುಳಿಯಲ್ಲಿ ಸಮೀಕ್ಷಕರು ಸಿಲುಕಿದ್ದು, ಕೆಲವೆಡೆ ಒಬ್ಬರ ಮಾಹಿತಿ ಭರ್ತಿ ಮಾಡಿಕೊಳ್ಳಲೂ ಒಂದರಿಂದ ಎರಡು ತಾಸು ಬೇಕಾಗುತ್ತಿದೆ. ಮ್ಯಾಪಿಂಗ್ ಸಮಸ್ಯೆಯಿಂದಾಗಿ ಒಂದು ಮನೆಯಲ್ಲಿ ಸಮೀಕ್ಷೆ ನಡೆಸಿದ ಬಳಿಕ ಪಕ್ಕದ ಮನೆಗೆ ತೆರಳುವ ಬದಲಿಗೆ, ಆ್ಯಪ್‌ನಲ್ಲಿ ತೋರಿಸಿದ ಮನೆಗೇ ಹೋಗಬೇಕಿದೆ. ಕೆಲವೆಡೆ ಒಂದೆರೆಡು ಕಿಲೋಮೀಟರ್ ದೂರದಲ್ಲಿ ತೋರಿಸಿರುತ್ತದೆ. ಅಲ್ಲಿಗೆ ಹೋಗಿ ಆ ಮನೆಯ ಮಾಹಿತಿಯನ್ನು ಭರ್ತಿ ಮಾಡಬೇಕಿರುವುದು
ಅನಿವಾರ್ಯವಾಗಿದೆ.

‘140 ಮನೆಗಳ ಗುರಿ ನಿಗದಿಪಡಿಸಿದ್ದಾರೆ. ಮೂರು ದಿನ ಕಳೆದರೂ ಒಂದು ಮನೆಯನ್ನೂ ಪೂರ್ತಿಯಾಗಿ ಸಮೀಕ್ಷೆ ಮಾಡಲು ಸಾಧ್ಯವಾಗಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಇಬ್ಬರು ಶಿಕ್ಷಕಿಯರು ಅಳಲು ತೋಡಿಕೊಂಡರು.

ಸಮೀಕ್ಷೆಯ ಕೆಲವು ಗೊಂದಲ ಬಗೆಹರಿಸಿಕೊಳ್ಳಲು ಸಹಾಯವಾಣಿ ಆರಂಭಿಸಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಕಾರ್ಯನಿರ್ವಹಿಸಲಿದೆ.
–ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.