ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆ ಬಹುತೇಕ ಭರ್ತಿಯಾಗಿ 10 ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ನದಿಗೆ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರಿಗೆ ಹೊಸ ಆಕರ್ಷಣೆ ಉಂಟುಮಾಡಿದೆ. ಹೆದ್ದಾರಿಯಲ್ಲಿ ಮುನಿರಾಬಾದ್ ಸೇತುವೆಯ ಮೇಲೆ ನಿಂತು ನೋಡುವವರ ಸಂಖ್ಯೆಯೂ ಸಾಕಷ್ಟಿದೆ.
ಜಲಾಶಯಕ್ಕೆ 87,700 ಕ್ಯುಸೆಕ್‌ನಷ್ಟು ಒಳಹರಿವು ಇದ್ದು, ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ದಂಡೆಯಲ್ಲಿ ನಿಂತು ಈ ಜಲರಾಶಿಯನ್ನು ನೋಡುವುದೇ ಒಂದು ಅದ್ಭುತ ಅನುಭವವಾಗಿದ್ದು, ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಟಿ.ಬಿ.ಡ್ಯಾಂನತ್ತ ಬರತೊಡಗಿದ್ದಾರೆ. ಅಣೆಕಟ್ಟೆ, ವೈಕುಂಠ ಅತಿಥಿಗೃಹದತ್ತ ತೆರಳಿ ಜಲರಾಶಿಯನ್ನು ಕಣ್ತುಂಬಿಕೊಳ್ಳಲು ಜನ ಹಾತೊರೆಯುತ್ತಿದ್ದಾರೆ.
ಮತ್ತೊಂದೆಡೆಯಲ್ಲಿ ಮುನಿರಾಬಾದ್ ಕಡೆ ಲೇಕ್‌ವ್ಯೂ ತನಕವೂ ಜನರಿಗೆ ತೆರಳಲು ಅವಕಾಶ ಇದ್ದು, ಅಲ್ಲಿಗೂ ಜನರು ದೊಡ್ಡ ಸಂಖ್ಯೆಯಲ್ಲಿ ಬಂದು ಜಲರಾಶಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಆತಂಕ ಇಲ್ಲ: ‘ಸದ್ಯ ತುಂಗಭದ್ರಾ ನದಿಯ ಒಳಹರಿವಿನ ಪ್ರಮಾಣ ಲಕ್ಷಕ್ಕಿಂತಲೂ ಕಡಿಮೆ ಇದೆ. ಹೀಗಾಗಿ ಎಲ್ಲಿಯೂ ಪ್ರವಾಹ ಭೀತಿ ಇಲ್ಲ. 3.5 ಲಕ್ಷಕ್ಕಿಂತ ಅಧಿಕ ಒಳಹರಿವು ಇದ್ದರೆ ಮಾತ್ರ ಕೆಲವು ಕಡೆ ಪ್ರವಾಹ ಸ್ಥಿತಿ ನೆಲೆಸುತ್ತದೆ. ಹೀಗಿದ್ದರೂ ನದಿ ಪಾತ್ರದ ಜನರು ಎಚ್ಚರದಿಂದ ಇರಲು ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಎಲ್ಲ ಗೇಟ್ ತೆರೆಯುವುದು ಅನುಮಾನ?: ತುಂಗಭದ್ರಾ ಮಂಡಳಿ ಈ ಮೊದಲು ನೀಡಿದ ಸೂಚನೆಯಂತೆ ಬುಧವಾರವೇ ಅಣೆಕಟ್ಟೆಯ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಹರಿಸಬೇಕಿತ್ತು. ಆದರೆ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಒಳಹರಿವು ಪ್ರಮಾಣವೂ ಕಡಿಮೆಯಾದ ಕಾರಣ ಮಂಡಳಿಯ ಯೋಜನೆ ಮುಂದಕ್ಕೆ ಹೋಗಿದೆ. ಒಂದೂವರೆ ಲಕ್ಷ ಕ್ಯುಸೆಕ್‌ಗಿಂತ ಅಧಿಕ ಒಳಹರಿವು ಇದ್ದರೆ ಮಾತ್ರ ಎಲ್ಲ ಗೇಟ್‌ಗಳನ್ನು ತೆರೆಯುವ ಸಾಧ್ಯತೆ ಇದೆ.
ಈ ಮಧ್ಯೆ, ಹೊಸಪೇಟೆ ಉಪವಿಭಾಗಾಧಿಕಾರಿ ವಿವೇಕಾನಂದ, ತಹಶೀಲ್ದಾರ್ ವಿಶ್ವಜೀತ್ ಮೆಹತಾ ಹಾಗೂ ಇತರ ಕಂದಾಯ ಅಧಿಕಾರಿಗಳು ಬುಧವಾರ ಹಂಪಿ, ಕಮಲಾಪುರ, ಹೊಸೂರು ಮೊದಲಾದ ಕಡೆಗಳಿಗೆ ತೆರಳಿ, ನದಿ ಪಾತ್ರದ ಜನರಿಗೆ ಎಚ್ಚರದಿಂದ ಇರಲು ಸೂಚಿಸಿದರು.
‘ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿ’
ಪ್ರವಾಹ ಉಂಟಾಗುವ ಸಾಧ್ಯತೆ ಮತ್ತು ಪ್ರವಾಹ ಸನ್ನದ್ಧತೆ ಕುರಿತು ಚರ್ಚಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಂಗಳವಾರ ಇಲ್ಲಿ ಸಭೆ ನಡೆಸಿದರು. ‘ಜಿಲ್ಲೆಯ ತುಂಗಾಭದ್ರಾ ಜಲಾಶಯದಲ್ಲಿ 3 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದಲ್ಲಿ ಮಾತ್ರ ಜಿಲ್ಲೆಯ ನದಿ ಪಾತ್ರದ 22 ಗ್ರಾಮಗಳಲ್ಲಿ ಪ್ರವಾಹ ಉಂಟಾಗುತ್ತದೆ. ಆದ್ದರಿಂದ ಈಗಾಗಲೇ ನೇಮಕ ಮಾಡಲಾಗಿರುವ ನೋಡಲ್ ಅಧಿಕಾರಿಗಳು ತಮಗೆ ನಿಯೋಜಿಸಲಾದ ಗ್ರಾಮಗಳಿಗೆ ಪ್ರತಿ ವಾರ ಭೇಟಿ ನೀಡಿ ಈ ಕುರಿತು ಅನುಪಾಲನಾ ವರದಿಯನ್ನು 3 ದಿನದೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು. 22 ಗ್ರಾಮಗಳ ನೋಡಲ್ ಅಧಿಕಾರಿಗಳಿಗೆ ಮೇಲ್ವಿಚಾರಣೆ ಮಾಡಲು ತಾಲ್ಲೂಕುವಾರು ಮೇಲ್ವಿಚಾರಣಾಧಿಕಾರಿಗಳನ್ನಾಗಿ ಹೊಸಪೇಟೆ ಹರಪನಹಳ್ಳಿ ಸಹಾಯಕ ಆಯುಕ್ತರನ್ನು ಜಂಟಿ ಕೃಷಿ ನಿರ್ದೇಶಕರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅವರನ್ಳು ನಿಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ ಜಿ. ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.