ADVERTISEMENT

ಗುಜರಾತ್ ಪ್ರವಾಸೋದ್ಯಮ ಇಲಾಖೆ ಟ್ವೀಟ್‌ಗೆ ರಿಟ್ವೀಟ್ ಮೂಲಕವೇ ಉತ್ತರ: ಆನಂದ್ ಸಿಂಗ್

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 6:21 IST
Last Updated 14 ಜುಲೈ 2022, 6:21 IST
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ತುಂಗಭದ್ರಾ ಜಲಾಶಯಕ್ಕೆ ಗುರುವಾರ ಬಾಗಿನ ಸಮರ್ಪಿಸಿದರು.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ತುಂಗಭದ್ರಾ ಜಲಾಶಯಕ್ಕೆ ಗುರುವಾರ ಬಾಗಿನ ಸಮರ್ಪಿಸಿದರು.   

ಹೊಸಪೇಟೆ (ವಿಜಯನಗರ): 'ಪಂಪಾ ಸರೋವರ ತಮ್ಮ ರಾಜ್ಯದಲ್ಲಿದೆ ಎಂದು ಗುಜರಾತ್ ಪ್ರವಾಸೋದ್ಯಮ ಇಲಾಖೆ ಮಾಡಿರುವ ಟ್ವೀಟ್‌ಗೆ ನಮ್ಮ ಇಲಾಖೆಯಿಂದ ರಿಟ್ವೀಟ್ ಮೂಲಕವೇ ಉತ್ತರ ಕೊಡಲಾಗುವುದು' ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.

ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಗುರುವಾರ ಬಾಗಿನ ಸಮರ್ಪಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
'ಆಂಜನೇಯನ ಜನ್ಮಸ್ಥಳ ತಿರುಮಲ, ಪಂಪಾ ಸರೋವರ ಗುಜರಾತ್ ನಲ್ಲಿದೆ' ಎಂದು ಹೇಳಿ ವಿವಾದ ಸೃಷ್ಟಿಸುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ಗುಜರಾತ್ ಪ್ರವಾಸೋದ್ಯಮ ಇಲಾಖೆ ಟ್ವೀಟ್ ಮಾಡಿರುವುದರಿಂದ ಅದಕ್ಕೆ ರಿಟ್ವೀಟ್ ಮೂಲಕ ಉತ್ತರ ಕೊಡಲಾಗುವುದು ಎಂದರು.

ಜುಲೈ 20ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿಗೆ ಬಂದು ಹೆಲಿಕ್ಯಾಪ್ಟರ್ ಮೂಲಕ ಪರಿಶೀಲನೆ ನಡೆಸುವರು. ಅವರ ನಿರ್ದೇಶನದ ಮೇರೆಗೆ ಬುಧವಾರ ಅಂಜನಾದ್ರಿ ಅಭಿವೃದ್ಧಿ ಕುರಿತು ಸಭೆ ನಡೆಸಲಾಗಿದೆ. ಮೊದಲ ಹಂತದಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸಲಾಗುವುದು. ಎಲ್ಲ ವಿಚಾರಗಳನ್ನು ಸಿ.ಎಂ. ಅವರ ಗಮನಕ್ಕೆ ತಂದು ಮುಂದುವರೆಯಲಾಗುವುದು ಎಂದು ಹೇಳಿದರು.

ಕಾಳಸಂತೆಯಲ್ಲಿ ಕಲಬೆರಕೆ ಅಕ್ಕಿ ಮಾರಾಟ ಮಾಡುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಅದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ಕೊಡಲಾಗಿದೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಅನೇಕ ವರ್ಷಗಳ ನಂತರ ತುಂಗಭದ್ರಾ ಜಲಾಶಯ ಅವಧಿಗೂ ಮುನ್ನವೇ ತುಂಬಿದೆ. ಇದು ಬಹಳ ಸಂತಸದ ವಿಷಯ. ವಿಜಯನಗರ ಜಿಲ್ಲೆ ರಚನೆಗೊಂಎ ಬಳಿಕ ಭರ್ತಿ ಆಗಿರುವುದು ಹೆಚ್ಚು ಖುಷಿ ನೀಡಿದೆ. ರೈತರ ಎರಡೂ ಬೆಳೆಗಳಿಗೆ ನೀರು ಹರಿಸಬಹುದು. ಗಂಗೆ ಇದೇ ರೀತಿಯಿಂದ ಶಾಂತ ರೀತಿಯಲ್ಲಿ ಹರಿಯಬೇಕು ಎಂದರು.

ಕೊಪ್ಪಳ ಸಂಸದ ಕರಡಿ ಸಂಗಣ್ಣ,ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್, ಕೊಪ್ಪಳ‌ ಎಸ್ಪಿ ಅರುಣಾಂಗ್ಷ ಗಿರಿ ಇದ್ದರು.

ಸಿದ್ದರಾಮೋತ್ಸವಕ್ಕೆ ಪ್ರತಿಕ್ರಿಯಿಸಲಾರೆ
'ಸಿದ್ದರಾಮೋತ್ಸವದ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ಅದು ಅವರಿಗೆ ಬಿಟ್ಟ ವಿಚಾರ. ಅದರ ಬಗ್ಗೆ ನನಗೇನೂ ಕೇಳಬೇಡಿ. ನಾನೊಂದು ಹೇಳುವುದು, ನೀವೊಂದು ಬರೆಯುವುದು ಬೇಡ' ಎಂದು ಆನಂದ್ ಸಿಂಗ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT