ADVERTISEMENT

ಎರಡು ತಿಂಗಳ ನಂತರ ಸ್ಮಾರಕ ವೀಕ್ಷಣೆಗೆ ಮುಕ್ತ- ಮೊದಲ‌ ದಿನವೇ ಹಂಪಿಗೆ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:25 IST
Last Updated 24 ಜೂನ್ 2021, 5:25 IST
ಹಂಪಿ ವಿಜಯ ವಿಠಲ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಪ್ರವಾಸಿಗರು ಅಂತರ ಕಾಯ್ದುಕೊಂಡು ಒಳ ಹೋಗುತ್ತಿರುವುದು.
ಹಂಪಿ ವಿಜಯ ವಿಠಲ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಪ್ರವಾಸಿಗರು ಅಂತರ ಕಾಯ್ದುಕೊಂಡು ಒಳ ಹೋಗುತ್ತಿರುವುದು.   

ಹೊಸಪೇಟೆ (ವಿಜಯನಗರ): ಕೋವಿಡ್ ಲಾಕ್‌ಡೌನ್ ತೆರವಾಗುತ್ತಿದ್ದಂತೆ ಇಲ್ಲಿನ ವಿಶ್ವಪ್ರಸಿದ್ಧ ಹಂಪಿ ಸ್ಮಾರಕಗಳ ವೀಕ್ಷಣೆ ಮೇಲಿದ್ದ ನಿರ್ಬಂಧ ತೆರವುಗೊಳಿಸಿರುವುದರಿಂದ ಪ್ರವಾಸಿಗರು ಹಂಪಿಯತ್ತ ಮುಖ ಮಾಡಿದ್ದಾರೆ.

ಎರಡು ತಿಂಗಳ ನಂತರ ಗುರುವಾರ ಹಂಪಿ ಸ್ಮಾರಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಮೊದಲ ದಿನವೇ ವಿವಿಧ ಭಾಗಗಳಿಂದ ಪ್ರವಾಸಿಗರು ಹಂಪಿಗೆ ದೌಡಾಯಿಸಿ, ಬಯಲು ವಸ್ತು ಸಂಗ್ರಹಾಲಯ ಕಣ್ತುಂಬಿಕೊಳ್ಳುತ್ತಿದ್ದಾರೆ.

ಹಂಪಿಯ ಅಪರೂಪದ ಸ್ಮಾರಕಗಳಲ್ಲಿ ಒಂದಾಗಿರುವ ಸಪ್ತಸ್ವರ ಮಂಟಪ, ಕಲ್ಲಿನ ರಥ ವೀಕ್ಷಿಸಲು ಬೆಳಿಗ್ಗೆಯೇ ಜನ ಬಂದಿದ್ದರು. ಎಲ್ಲ ಸ್ಮಾರಕಗಳ ಪ್ರವೇಶ ದ್ವಾರದ ಬಳಿ ಗುರುತು ಹಾಕಲಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಭದ್ರತಾ ಸಿಬ್ಬಂದಿ ಒಬ್ಬೊಬ್ಬರನ್ನೇ ಒಳಗೆ ಬಿಡುತ್ತಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಪ್ರವೇಶ ನೀಡಲಾಗುತ್ತಿದೆ. ಅಂತರ ಕಾಯ್ದುಕೊಂಡು ಇರಬೇಕೆಂದು ಭದ್ರತಾ ಸಿಬ್ಬಂದಿ ಸೂಚಿಸುತ್ತಿದ್ದಾರೆ.

ADVERTISEMENT

ರಾಣಿಸ್ನಾನಗೃಹ, ಮಹಾನವಮಿ ದಿಬ್ಬ, ಉಗ್ರ ನರಸಿಂಹ, ಸಾಸಿವೆಕಾಳು ಗಣಪ, ಕಡಲೆಕಾಳು ಗಣೇಶ ಸ್ಮಾರಕಗಳ ಬಳಿ ಪ್ರವಾಸಿಗರು ಹೆಚ್ಚಿದ್ದರು.

ಪ್ರತಿ ವರ್ಷ ಮಳೆಗಾಲ, ಚಳಿಗಾಲದಲ್ಲಿ ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುತ್ತಾರೆ. ಮಳೆಗಾಲದ ಆರಂಭದಲ್ಲೇ ಸ್ಮಾರಕಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದರಿಂದ ಬರುವ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು.

ಬುಧವಾರವಷ್ಟೇ ಹಂಪಿ‌ ಜೂ ಕೂಡ ಬಾಗಿಲು ತೆರೆದಿದ್ದು, ಮೊದಲ ದಿನವೇ 50ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.