
ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ ಜ.1ರಿಂದ 31ರವರೆಗೆ ವ್ಯಾಪಕವಾಗಿ ರಸ್ತೆ ಸುರಕ್ಷತಾ ಕುರಿತು ಜಾಗೃತಿ ಮೂಡಿಸಲಾಗುವುದು. ನಂತರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ದಂಡ ಹಾಗೂ ಶಿಕ್ಷೆ ವಿಧಿಸುವುದು ಗ್ಯಾರಂಟಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಎಂ.ರಾಜಶೇಖರ ಎಚ್ಚರಿಸಿದರು.
ತಮ್ಮ ಕಚೇರಿಯಲ್ಲಿ ಶನಿವಾರ ಸಂಚಾರ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಬೆಂಕಿ ಅನಾಹುತಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬಸ್‌ಗಳಲ್ಲಿ ಸುರಕ್ಷತಾ ಕ್ರಮ ಕೈಗೊಂಡಿರುವ ಕುರಿತು ಹಾಗೂ ಲಗೇಜ್‌ಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಪೊಲೀಸ್ ಇಲಾಖೆಯವರಿಗೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ಮಾತನಾಡಿ, ಸಾರಿಗೆ ಸಂಸ್ಥೆಯ ಬಸ್ ಚಾಲಕರು ಬೇಕಾಬಿಟ್ಟಿಯಾಗಿ ಬಸ್‌ನ ಚಾಲನೆ ಮಾಡುತ್ತಾರೆ. ಇದರಿಂದ ಇನ್ನುಳಿದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತದೆ. ಬಸ್ ಚಾಲಕರಿಗೆ ಚಾಲನೆ ನಿಯಮ ಪಾಲಿಸಲು ತಿಳಿಸಿರಿ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗೆ ಸೂಚಿಸಿದರು.
ಸಿಜೆಎಂ ಮತ್ತು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸುಬ್ರಮಣ್ಯ ಎನ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಚೈತ್ರ ಜೆ. ಮಾತನಾಡಿ ಸಲಹೆಗಳನ್ನು ನೀಡಿದರು.
ಎಎಸ್‌ಪಿ ಜಿ.ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಗಾಗಿ ಹಾಗೂ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಪೊಲೀಸ್ ಇಲಾಖೆಯು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹುಲಗಪ್ಪ ಮಾತನಾಡಿದರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರುತಿ ತೇಲಿ, ನಗರಸಭೆ ಪೌರಾಯುಕ್ತ ಎ.ಶಿವಕುಮಾರ, ವಕೀಲರಾದ ಈ.ಪುಷ್ಪಲತಾ, ಪಿ.ಶ್ರೀನಿವಾಸಮೂರ್ತಿ, ಇನ್‌ಸ್ಪೆಕ್ಟರ್ ಲಖನ್ ಮಸಗುಪ್ಪಿ, ಪಿಎಸ್‌ಐ ಎಚ್.ನಾಗರತ್ನ, ಹಂಪಿ ಸಿಪಿಐ ರಾಜೇಶ ಭಟಕುರ್ಕಿ, ಪಿಯು ಡಿಡಿ ನಾಗರಾಜ ಹವಾಲ್ದಾರ. ಕೆಕೆಆರ್‌ಟಿಸಿಯ ಡಿಟಿಒ ಆರ್.ಪಿ.ಭಜಂತ್ರಿ, ದಿವ್ಯಶ್ರೀ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.