ADVERTISEMENT

ತುಂಗಭದ್ರಾ ಅಣೆಕಟ್ಟೆಯಲ್ಲಿ ಕಾಮಗಾರಿ ಬಿರುಸು: ಗೇಟ್‌ ಎತ್ತುವ ಪ್ರಯೋಗ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 15:43 IST
Last Updated 12 ಜನವರಿ 2026, 15:43 IST
   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ನೂತನ 18ನೇ ಕ್ರೆಸ್ಟ್‌ಗೇಟ್‌ ಅನ್ನು ಇಡಿಯಾಗಿ ಎತ್ತುವ ಪ್ರಯೋಗ ಸೋಮವಾರ ಸಂಜೆ ಯಶಸ್ವಿಯಾಗಿ ನಡೆದಿದ್ದು, ಎಂಜಿನಿಯರ್‌ಗಳು ಮತ್ತು ಕೆಲಸಗಾರರು ಸಂಭ್ರಮಿಸಿದರು.

‘ಸುಮಾರು 50 ಟನ್‌ ತೂಕದ ಗೇಟ್‌ ಅನ್ನು ಬಿಡಿಬಿಡಿಯಾಗಿ ತಂದು ಜೋಡಿಸಲಾಗಿತ್ತು. ಹಳೆಯ ಚೈನ್‌ ಲಿಂಕ್‌ ಬಳಸಿಯೇ ಗೇಟ್ ಮೇಲಕ್ಕೆತ್ತುವ ಪ್ರಯೋಗ ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದೇವೆ. ಇದು ಕೆಲಸಗಾರರಲ್ಲಿ ಹುರುಪು ಮೂಡಿಸಿದೆ’ ಎಂದು ತುಂಗಭದ್ರಾ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಎಲ್ಲಾ ಗೇಟ್‌ಗಳಿಗೆ ಹೊಸ ಚೈನ್‌ಲಿಂಕ್‌ ಅನ್ನೇ ಬಳಸಲಾಗುತ್ತದೆ. ಚೆನ್ನೈಯಲ್ಲಿ ಅದು ತಯಾರಾಗಲಿದ್ದು, ಇದೀಗ ಹಳೆ ಚೈನ್‌ಲಿಂಕ್‌ನಲ್ಲಿ ಪ್ರಯೋಗ ನಡೆಸಲಾಗಿದೆ. ಎಲ್ಲವೂ ಸಮರ್ಪಕವಾಗಿ ನಡೆದಿದೆ, ಗೇಟ್‌ ನಿರೀಕ್ಷಿಸಿದ ರೀತಿಯಲ್ಲೇ ಮೇಲಕ್ಕೆ ಬಂದಿದೆ’ ಎಂದು ಅವರು ಹೇಳಿದರು.

ADVERTISEMENT

ಡಿಸೆಂಬರ್‌ 24ರಂದು 18ನೇ ಗೇಟ್‌ನ ಅಳವಡಿಕೆ ಕಾರ್ಯ ಆರಂಭವಾಗಿದ್ದು, ಅದು ಜನವರಿ 7ರಂದು ಕೊನೆಗೊಂಡಿತ್ತು. ಬಳಿಕ ಗೇಟ್ ಎತ್ತುವ ಪ್ರಯೋಗಕ್ಕೆ ಸಿದ್ಧತೆ ನಡೆದಿತ್ತು. ಅದು ಐದು ದಿನದ ಬಳಿಕ ಯಶಸ್ವಿಯಾಗಿದೆ.

ಮತ್ತೊಂದೆಡೆ 4, 20 ಮತ್ತು 27ನೇ ಗೇಟ್‌ಗಳಲ್ಲಿ ಹೊಸ ಕ್ರೆಸ್ಟ್‌ಗೇಟ್ ಅಳವಡಿಕೆ ಕಾರ್ಯ ಮುಂದುವರಿದಿದ್ದು, 11 ಮತ್ತು 28ನೇ ಗೇಟ್‌ಗಳಲ್ಲಿ ಹಳೆ ಗೇಟ್‌ ತೆರವುಗೊಳಿಸುವ ಕಾರ್ಯ ಬಹುತೇಕ ಕೊನೆಗೊಂಡಿದೆ.