ADVERTISEMENT

ತುಂಗಭದ್ರಾ ಅಣೆಕಟ್ಟೆ ದುರಂತ: ಅಪಾರ ನೀರು ಪೋಲು–ಇದು ಯಾರ ಸೋಲು

ಎಂ.ಜಿ.ಬಾಲಕೃಷ್ಣ
Published 12 ಆಗಸ್ಟ್ 2024, 6:24 IST
Last Updated 12 ಆಗಸ್ಟ್ 2024, 6:24 IST
ತುಂಗಭದ್ರಾ ಅಣೆಕಟ್ಟೆಯಲ್ಲಿ ಕಳಚಿಹೋದ 19ನೇ ಕ್ರಸ್ಟ್‌ಗೇಟ್‌ನಿಂದ ಹೊರಬೀಳುತ್ತಿರುವ ಭಾರಿ ಪ್ರಮಾಣದ ನೀರನ್ನು ಭಾನುವಾರ ಹೆದ್ದಾರಿ ಸವಾರರು ಕುತೂಹಲದಿಂದ ನೋಡಿದರು –ಪ್ರಜಾವಾಣಿ ಚಿತ್ರ/ ಲವ ಕೆ.
ತುಂಗಭದ್ರಾ ಅಣೆಕಟ್ಟೆಯಲ್ಲಿ ಕಳಚಿಹೋದ 19ನೇ ಕ್ರಸ್ಟ್‌ಗೇಟ್‌ನಿಂದ ಹೊರಬೀಳುತ್ತಿರುವ ಭಾರಿ ಪ್ರಮಾಣದ ನೀರನ್ನು ಭಾನುವಾರ ಹೆದ್ದಾರಿ ಸವಾರರು ಕುತೂಹಲದಿಂದ ನೋಡಿದರು –ಪ್ರಜಾವಾಣಿ ಚಿತ್ರ/ ಲವ ಕೆ.   

ರಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯಲ್ಲಿ ಶುಕ್ರವಾರ ರಾತ್ರಿಯಷ್ಟೇ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಶನಿವಾರ ಆ ಸಂಭ್ರಮದಲ್ಲೇ ನಾಡು ಮಿಂದೇಳುತ್ತ ಹಾಯಾಗಿ ನಿದ್ದೆಗೆ ಜಾರುವ ಹೊತ್ತಲ್ಲೇ 19ನೇ ಕ್ರಸ್ಟ್‌ಗೇಟ್‌ ಛಿದ್ರವಾಗಿ ಹೋಗಿತ್ತು. ನೆಮ್ಮದಿಯ ನಾಳೆಗಳ ಕನಸು ಕಾಣುತ್ತಿದ್ದ ಲಕ್ಷಾಂತರ ರೈತರ ಕನಸೂ ಕ್ಷಣದಲ್ಲಿ ಒಡೆದು ಹೋಗಿತ್ತು.

‘ನಮಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇವರು ಗೇಟ್‌ಗಳನ್ನು ನಿರ್ವಹಣೆ ಮಾಡಿಲ್ಲ ಎಂಬುದು ಸ್ಪಷ್ಟ. ನಮ್ಮ ಬದುಕಿನೊಂದಿಗೆ ಇವರದು ಚೆಲ್ಲಾಟವಲ್ಲದೆ ಬೇರೇನು? ಬಾಗಿನ ಅರ್ಪಿಸುತ್ತೇವೆ ಎಂದಾಗ ಕಳೆದ ವಾರ ನಮ್ಮನ್ನು ತಡೆದರು, ಈಗ ನೋಡಿ, ನಮಗೂ ಬಾಗಿನ ಅರ್ಪಿಸುವ ಅವಕಾಶ ಸಿಗಲಿಲ್ಲ, ಮುಖ್ಯಮಂತ್ರಿ ಅವರಿಗೂ ಸಿಗುವುದು ಸಂಶಯವೆಂದೇ ತೋರುತ್ತದೆ’ ಎಂದು ರೈತ ಮುಖಂಡ ರುದ್ರಪ್ಪ ಬಡಬಡನೆ ಹೇಳಿಬಿಟ್ಟರು. 

ಅವರ ನೋವು ಎಂತಹವರಿಗೂ ಅರ್ಥವಾಗುವಂತಿತ್ತು. ಬಾಗಿನ ಎಂಬುದು ಭಾವನಾತ್ಮಕ ವಿಚಾರವಾಗಿತ್ತು. ಎರಡು ವರ್ಷದ ಬಳಿಕ ಜಲಾಶಯ ತುಂಬಿದ್ದರಿಂದ ರೈತರೆಲ್ಲ ಈ ಬಾರಿ ಖುಷಿಯಲ್ಲಿದ್ದರು. ಅವರ ಕನಸು ಛಿದ್ರವಾಗಿದ್ದನ್ನು ರುದ್ರಪ್ಪ ಅವರಂತೆ ಇನ್ನೂ ಹಲವು ರೈತರು ನಿವೇದಿಸಿಕೊಂಡರು.

ADVERTISEMENT

ಎಲ್ಲೆಡೆ ದುಗುಡ: ‘ತುಂಗಭದ್ರಾ ಅಣೆಕಟ್ಟೆ ಒಡೆದು ಹೋಯಿತಂತೆ, ನೀರು ಊರುಗಳಿಗೆ ನುಗ್ಗುತ್ತದೆ ಅಂತೆ.. ’ ಎಂಬ ವದಂತಿಗಳು ಭಾನುವಾರ ಹರಡಿದ್ದವು. ಆದರೆ ತುಂಗಭದ್ರಾ ಮಂಡಳಿ ಮತ್ತು ಜಿಲ್ಲಾಡಳಿತ ಜನರ ಭಯ ದೂರ ಮಾಡುವ ಯತ್ನ ಮಾಡಿತು. 19ನೇ ಗೇಟ್‌ನಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಲೇ ಇರುವುದು ಅಪಾಯಕಾರಿ ಎಂಬುದು ಗೊತ್ತಿರುವ ಕಾರಣ ಬಹುತೇಕ ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಯಿತು. ಆದರೆ ಒಮ್ಮೆಗೇ ದೊಡ್ಡ ಪ್ರಮಾಣದಲ್ಲಿ ನೀರು ಬಿಡದೆ ಇದ್ದ ಕಾರಣ ಹಂಪಿ ಸಹಿತ ಇತರೆಡೆ ನಿಧಾನವಾಗಿ ನೀರು ಏರುತ್ತ ಹೋಯಿತು. ಹಂಪಿಯ ಕೋದಂಡರಾಮ ದೇವಸ್ಥಾನದ ಬಳಿ ಮತ್ತ ತಿಳಿನೀರು ಹರಿಯಿತು.

ನೀರಿಗೆ ತತ್ವಾರ ನಿಶ್ಚಿತ: ತುಂಗಭದ್ರಾ ಅಣೆಕಟ್ಟೆಯನ್ನೇ ನಂಬಿಕೊಂಡಿರುವ ನಗರಗಳಲ್ಲಿ ಕುಡಿಯುವ ನೀರಿಗೆ ಆತಂಕ ಇಲ್ಲವೇ ಇಲ್ಲ, ಆದರೆ ರೈತರ ಎರಡನೇ ಬೆಳೆಗೆ ಖಂಡಿತ ಈ ಬಾರಿ ನೀರು ಸಿಗುವುದಿಲ್ಲ, ಕಳೆದ ವರ್ಷ ಅನುಭವಿಸಿದ ವೇದನೆ ಈ ಬಾರಿಯೂ ಅನಿವಾರ್ಯ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಾನವಾರ ಅಣೆಕಟ್ಟೆಗೆ ಭೇಟಿ ನೀಡಿದಾಗಲೂ ಇದನ್ನೇ ಒತ್ತಿ ಹೇಳಿದ್ದು, ರೈತರ ಒಂದು ಬೆಳೆ ರಕ್ಷಣೆಯ ಹೊಣೆ ಸರ್ಕಾರದದ್ದು ಎಂಬುದನ್ನು ಸ್ಪಷ್ಟಪಡಿದಿಸಿದ್ದಾರೆ. ಈ ಮೂಲಕ ಎರಡನೇ ಬೆಳೆಗೆ ನೀರು ಈ ಬಾರಿ ಇಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.

ಅಣೆಕಟ್ಟೆಯ ಕ್ರಸ್ಟ್‌ಗೇಟ್‌ ಮುರಿದು ವ್ಯರ್ಥವಾಗಿ ಹರಿದು ಹೋಗುತ್ತಿರುವ ಅಪಾರ ಪ್ರಮಾಣದ ನೀರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೀಕ್ಷಿಸಿದರು– ಪ್ರಜಾವಾಣಿ ಚಿತ್ರ
ಬಾಗಿನ ಅರ್ಪಿಸಲು ಆಗಮಿಸಲಿರುವ ಗಣ್ಯರಿಗೆ ಸಿದ್ಧವಾಗಿದ್ದ ಸ್ವಾಗತ ಕಮಾನು ಈಗ ವಿಡಂಬನೆಯ ವಿಷಯವಾಗಿದೆ –ಪ್ರಜಾವಾಣಿ ಚಿತ್ರ
ಹಂಪಿಯ ಚಕ್ರತೀರ್ಥ ಕೋದಂಡರಾಮ ದೇವಸ್ಥಾನದ ಸಮೀಪಕ್ಕೆ ಭಾನುವಾರ ಸಂಜೆ ಬಂದ ತುಂಗಭದ್ರೆಯ ತಿಳಿ ನೀರು– ಪ್ರಜಾವಾಣಿ ಚಿತ್ರ

ಗೇಟ್‌ ದುರಸ್ತಿಗೆ ಸಿದ್ಧವಿದೆ ಸ್ಥಳೀಯ ಸಂಸ್ಥೆ– ನಂಬಿಕೆ ಇದೆಯೇ? ಟಿ.ಬಿ.ಡ್ಯಾಂ ಪ್ರದೇಶದಲ್ಲೇ ಇದೆ ತುಂಗಭದ್ರಾ ಕೃಷಿ ಉಪಕರಣ ಮಾರಾಟ ಸಹಕಾರ ಸಂಘ (ಟಾಯ್ಸ್‌). ನೀರನ್ನು ಬರಿದು ಮಾಡದೆಯೇ ಉಸುಕಿನ ಮೂಟೆಗಳನ್ನೇ ಕ್ರೇನ್‌ಗಳಲ್ಲಿ ಕಟ್ಟಿ ನೀರಿಗೆ ಅಡ್ಡಲಾಗಿ ಹಿಡಿದು ಗೇಟ್‌ಗಳನ್ನು ಅಳವಡಿಸಬಹುದು ಎಂದು ಅದು ತನ್ನ ಅನುಭವದ ಮೂಲಕವೇ ಹೇಳುತ್ತಿದೆ. ಕೇಳಿಸಿಕೊಳ್ಳುವವರು ಇಲ್ಲ ಎಂಬ ಕೊರಗೂ ಸಂಘವನ್ನು ಕಾಡುತ್ತಿದೆ. ‘ನಮ್ಮ ಸಂಘದಲ್ಲಿ ಅದೆಷ್ಟೋ ಮಂದಿ ನುರಿತ ತಜ್ಞರಿದ್ದಾರೆ. ಆಲಮಟ್ಟಿ ನಾರಿಹಳ್ಳ ಜಲಾಶಯ ಸಹಿತ ಹಲವು ಜಲಾಶಯಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಟಿಎಸ್‌ಪಿ ಸಂಸ್ಥೆ ಕೈಚೆಲ್ಲಿದ ಕೆಲಸವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇಂತಹ ತಜ್ಞರ ನೆರವನ್ನು ಯಾಕೆ ತುಂಗಭದ್ರಾ ಮಂಡಳಿಯವರು ತುಂಗಭದ್ರಾ ಅಣೆಕಟ್ಟೆಗೆ ಸಂಬಂಧಿಸಿದವರು ಪಡೆಯುತ್ತಿಲ್ಲವೋ ಗೊತ್ತಿಲ್ಲ. ನೀರು ಖಾಲಿ ಮಾಡಿ ರೈತರಿಗೆ ಖಾಲಿ ಚೊಂಬು ಕೊಡುವ ಹುನ್ನಾರ ನಡೆಸದಂತಿದೆ’ ಎಂದು ‘ಟಾಯ್ಸ್‌’ನ ನಿರ್ದೇಶಕ ಶಂಕರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.