
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸುವ ಕೆಲಸಕ್ಕೆ ಶುಕ್ರವಾರ ಪೂಜೆಯೊಂದಿಗೆ ಚಾಲನೆ ಸಿಕ್ಕಿದ್ದು, ಈ ತಿಂಗಳ ಮೂರನೇ ವಾರದ ಬಳಿಕ ಒಂದೊಂದೇ ಗೇಟ್ ಕಳಚಿ ಹೊಸ ಗೇಟ್ ಅಳವಡಿಕೆ ಆರಂಭವಾಗುವ ಸಾಧ್ಯತೆ ಕಾಣಿಸಿದೆ.
‘ಸದ್ಯ ನೀರು ಕಡಿಮೆಯಾದಂತೆಲ್ಲಾ ಗೇಟ್‌ಗಳನ್ನು ತುಂಡರಿಸಿ ಮೇಲಕ್ಕೆತ್ತುವ ಕೆಲಸ ನಡೆಯಲಿದೆ. ಆಗ ಇದು ಗೇಟ್ ಅಳವಡಿಕೆ ಕೆಲಸವನ್ನು ಸುಲಭಗೊಳಿಸಲಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಗೇಟ್ ಅಳವಡಿಕೆಗೆ ಎಲ್ಲ ಪ್ರಯತ್ನ ನಡೆಯಲಿದೆ’ ಎಂದು ತುಂಗಭದ್ರಾ ಮಂಡಳಿಯ ಎಂಜಿನಿಯರ್ ಒಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಸದ್ಯ 67 ಟಿಎಂಸಿ ಅಡಿಯಷ್ಟು ನೀರಿದೆ. ಗರಿಷ್ಠ 1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸದ್ಯ ನೀರಿನ ಮಟ್ಟ 1,621.98 ಅಡಿಯಷ್ಟಿದೆ. ಇದು 1610 ಅಡಿಗೆ ತಲುಪಿದಾಗ ಬೆಡ್ ಕಾಂಕ್ರೀಟ್ ಅಥವಾ ಕ್ರೆಸ್ಟ್ ಹಂತಕ್ಕೆ ನೀರು ತಲುಪುತ್ತದೆ. ಆಗ ಎಲ್ಲ ಗೇಟ್ ಬದಲಿಸಿ ಹೊಸ ಗೇಟ್ ಅಳವಡಿಕೆ ಸಾಧ್ಯವಾಗುತ್ತದೆ. ಸದ್ಯ ಆ ಮಟ್ಟಕ್ಕೆ ನೀರು ಇಳಿಕೆಯಾಗುವುದರತ್ತಲೇ ಎಲ್ಲರ ಗಮನ ಇದೆ’ ಎಂದು ಅವರು ಹೇಳಿದರು.
ನದಿಗೆ ನೀರು?: ಎರಡನೇ ಬೆಳೆಗಂತೂ ಈ ಬಾರಿ ನೀರಿಲ್ಲ, ಸದ್ಯ ಮೊದಲ ಬೆಳೆಗಷ್ಟೇ ಕಾಲುವೆಗಳಲ್ಲಿ ಹರಿಯುತ್ತಿದೆ. ಆದರೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಅವರ ಕೋಟಾದಷ್ಟು ನೀರನ್ನು ನದಿಗೆ ಹರಿಸುವ ಮೂಲಕ ಶೀಘ್ರ ಜಲಾಶಯದ ನೀರನ್ನು ಖಾಲಿ ಮಾಡುವ ಚಿಂತನೆಯಲ್ಲಿ ತುಂಗಭದ್ರಾ ಮಂಡಳಿ ಇದೆ. ಬಹುತೇಕ ಒಂದೆರಡು ದಿನದಲ್ಲಿ ಅದು ತೀರ್ಮಾನವಾಗುವ ಸಾಧ್ಯತೆ ಇದೆ.
‘ವಿದ್ಯುತ್ ಉತ್ಪಾದನೆ ರೂಪದಲ್ಲಿ ನೀರನ್ನು ನದಿಗೆ ಹರಿಸಿ ಆಂಧ್ರದ ಕೋಟಾವನ್ನು ಬಿಡುವ ಸಾಧ್ಯತೆ ಇದೆ. ಆಂಧ್ರಕ್ಕೆ 7 ಟಿಎಂಸಿ ಅಡಿ, ತೆಲಂಗಾಣಕ್ಕೆ 5 ಟಿಎಂಸಿ ಅಡಿ ನೀರು ನದಿಗೆ ಹರಿದರೆ ಜಲಾಶಯದ ನೀರಿನ ಮಟ್ಟದಲ್ಲಿ ಶೀಘ್ರ ಕುಸಿತವಾಗುವ ಸಾಧ್ಯತೆ ದಟ್ಟವಾಗಿದೆ’ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ಭಕ್ತಿಯ ಸಿಂಚನ: ಶುಕ್ರವಾರ ತುಂಗಭದ್ರಾ ಅಣೆಕಟ್ಟೆಯ ಮೇಲ್ಗಡೆ ಭಕ್ತಿಯ ಸಿಂಚನ ಮನೆಮಾಡಿತ್ತು. ಗೇಟ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡುವ ಮೊದಲು ದೇವತಾ ಕಾರ್ಯ, ಹೋಮ ನೆರವೇರಿಸಲಾಯಿತು. ಟಿ.ಬಿ.ಬೋರ್ಡ್ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ, ಅಧೀಕ್ಷಕ ಎಂಜಿನಿಯರ್ ನಾರಾಯಣ ನಾಯ್ಕ, ಸೆಕ್ಷನ್ ಎಂಜಿನಿಯರ್ ಕಿರಣ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್‌ಪಿ ಎಸ್.ಜಾಹ್ನವಿ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶ್ರುತಿ ಎಂ.ಎಂ. ಸಹಿತ ಹಲವರು ಪಾಲ್ಗೊಂಡಿದ್ದರು.
ಮಧ್ಯಾಹ್ನದ ನಂತರ 18ನೇ ಗೇಟ್‌ನಲ್ಲಿ ಗ್ಯಾಸ್ ಕಟ್ಟರ್ ಬಳಸಿ ಗೇಟ್ ಕವಚ ಕಳಚುವ, ಅನಗತ್ಯ ನಟ್, ಬೋಲ್ಟ್‌ಗಳನ್ನು ಬಿಚ್ಚುವ ಕೆಲಸ ನಡೆಯಿತು. ಜತೆಗೆ ನೀರಿನ ಮಟ್ಟದಿಂದ ಮೇಲ್ಭಾಗದ ಗೇಟ್ ಭಾಗವನ್ನು ತುಂಡರಿಸಿ ತೆಗೆಯುವ ಕೆಲಸಕ್ಕೂ ಚಾಲನೆ ನೀಡಲಾಯಿತು.
ಡಿಸೆಂಬರ್ 3ನೇ ವಾರದಿಂದ ಗೇಟ್ ಅಳವಡಿಕೆ ಅದಕ್ಕೆ ಮೊದಲು ಹಂತ ಹಂತವಾಗಿ ಹಳೆ ಗೇಟ್‌ಗಳಿಗೆ ಕತ್ತರಿ ಗೇಟ್ ಅಳವಡಿಕೆಗೆ ವೇಗ ಸಿಗುವ ಸಾಧ್ಯತೆ
ಕೆಲಸಕ್ಕೆ ಚಾಲನೆ ನೀಡುವ ವೇಳೆ ನಾನೂ ಅಲ್ಲಿದ್ದೆ. ಎಲ್ಲವೂ ನಿರೀಕ್ಷಿಸಿದ ರೀತಿಯಲ್ಲೇ ನಡೆದು ಮುಂದಿನ ಮಳೆಗಾಲಕ್ಕೆ ಮೊದಲು ಗೇಟ್ ಅಳವಡಿಕೆ ಆಗುವ ವಿಶ್ವಾಸ ಇದೆಕವಿತಾ ಎಸ್.ಮನ್ನಿಕೇರಿ ಜಿಲ್ಲಾಧಿಕಾರಿ
50 ಟನ್ ತೂಕದ ಗೇಟ್ ಒಂದೊಂದು ಕ್ರೆಸ್ಟ್‌ಗೇಟ್ 50 ಟನ್‌ಗಿಂತಲೂ ಅಧಿಕ ತೂಕ ಇದೆ. 60 ಅಡಿ ಅಗಲ 20 ಅಡಿ ಎತ್ತರದ ಗೇಟ್ ತೂಕ ಇಷ್ಟಾಗುತ್ತದೆ. ಹೀಗಾಗಿ ಒಂದೊಂದು ಗೇಟ್ ಅನ್ನು ತಲಾ 5 ಅಡಿಯ ನಾಲ್ಕು ತುಂಡುಗಳಾಗಿ ಮಾಡಿ ಅವುಗಳನ್ನು ಅಣೆಕಟ್ಟೆಯ ಮೇಲಕ್ಕೆ ಕೊಂಡೊಯ್ದು ಅಳವಡಿಸಿ ಬಳಿಕ ವೆಲ್ಡ್ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.