ತುಂಗಭದ್ರಾ ಜಲಾಶಯ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯಕ್ಕೆ 65 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಅಣೆಕಟ್ಟೆಯಿಂದ ನದಿಗೆ ನೀರು ಬಿಡಲಾಗುವುದು ಎಂದು ತುಂಗಭದ್ರಾ ಮಂಡಳಿ ಎಚ್ಚರಿಕೆ ನೀಡಿದ್ದರೂ, ಭಾನುವಾರ ಮಧ್ಯಾಹ್ನದ ತನಕವೂ ನೀರು ಹರಿಸಿಲ್ಲ.
ಶನಿವಾರ ಸರಾಸರಿ ಒಳಹರಿವಿನ ಪ್ರಮಾಣ 60 ಸಾವಿರ ಕ್ಯೂಸೆಕ್‌ನಷ್ಟಿತ್ತು, ಭಾನುವಾರ ಅದು 65,182 ಕ್ಯೂಸೆಕ್‌ಗೆ ಹೆಚ್ಚಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ 67.47 ಟಿಎಂಸಿ ಅಡಿಯಷ್ಟಾಗಿದೆ. ಕ್ರಸ್ಟ್‌ಗೇಟ್‌ಗಳ ಸುರಕ್ಷತೆಯ ದೃಷ್ಟಿಯಿಂದ ಈ ಬಾರಿ ಗರಿಷ್ಠ 80 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಿಸಲು ಈಗಾಗಲೇ ನಿರ್ಧರಿಸಿರುವ ಕಾರಣ ಯಾವುದೇ ಕ್ಷಣದಲ್ಲಿ ನೀರನ್ನು ಹಂತ ಹಂತವಾಗಿ ಹೊರಬಿಡುವ ಸಾಧ್ಯತೆ ದಟ್ಟವಾಗಿದೆ.
ಅಣೆಕಟ್ಟೆಯ ಗರಿಷ್ಠ ಎತ್ತರ 1,633 ಅಡಿ ಆಗಿದ್ದು, ಸದ್ಯ 1,622.12 ಅಡಿ ಮಟ್ಟದಲ್ಲಿ ನೀರಿದೆ. ನೀರಿನ ಮಟ್ಟ 1,626 ಅಡಿಗೆ ತಲುಪಿದಾಗ ಜಲಾಶಯದಲ್ಲಿ 80 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗುತ್ತದೆ. ಒಟ್ಟು 105.78 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಸಾಧ್ಯವಿರುವ ಜಲಾಶಯದಿಂದ ಈ ಬಾರಿ ಅಧಿಕ ಪ್ರಮಾಣದಲ್ಲಿ ನೀರು ನದಿಗೆ ಹರಿದುಹೋಗುವ ಸಾಧ್ಯತೆ ಇದೆ. ಜುಲೈ 2ರಿಂದ ಎಡದಂಡೆ ಕಾಲುವೆಯ ಮೂಲಕ ಕೃಷಿ ಜಮೀನುಗಳಿಗೆ ನೀರು ಹರಿಯಲಿದ್ದು, ಕ್ರಸ್ಟ್‌ಗೇಟ್‌ಗಳ ಮೂಲಕ ಯಾವಾಗ ನೀರು ಹದಿಗೆ ಹರಿಯುತ್ತದೆ ಎಂಬ ಕುತೂಹಲ ನೆಲೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.