ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್‌ಗೂ ಅಧಿಕ ಒಳಹರಿವು ಇರುವ ಕಾರಣ ಹಾಗೂ ಜಲಾಶಯದಲ್ಲಿ ಈಗಾಗಲೇ 61.88 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿರುವುದರಿಂದ ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನೀರನ್ನು ನದಿಗೆ ಹರಿಸುವ ನಿರೀಕ್ಷೆ ಇದೆ.
‘ಅಣೆಕಟ್ಟೆಯ ಕ್ರಸ್ಟ್‌ಗೇಟ್‌ಗಳನ್ನು ತೆರೆದು 25 ಸಾವಿರ ಕ್ಯೂಸೆಕ್ ತನಕ ನೀರು ಹೊರಬಿಡುವ ಸಾಧ್ಯತೆ ಇದೆ. ಹೀಗಾಗಿ ಅಣೆಕಟ್ಟೆಯ ಕೆಳಭಾಗದಲ್ಲಿ ಇರುವ ನದಿ ದಂಡೆಯ ಜನರು ಎಚ್ಚರದಿಂದ ಇರಬೇಕು’ ಎಂದು ತುಂಗಭದ್ರಾ ಮಂಡಳಿ ಶನಿವಾರ ಹೊರಡಿಸಿದ ತುರ್ತು ಪ್ರಕಟಣೆಯಲ್ಲಿ ತಿಳಿಸಿದೆ.
1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸದ್ಯ 1,620.20 ಅಡಿ ಮಟ್ಟದಲ್ಲಿ ನೀರು ಇದೆ. 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯಕ್ಕೆ ಪ್ರತಿದಿನ 4 ಟಿಎಂಸಿ ಅಡಿಗೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯ ಕ್ರಸ್ಟ್‌ಗೇಟ್‌ಗಳು ದುರ್ಬಲವಾಗಿರುವ ಕಾರಣ ಈ ಮಳೆಗಾಲದಲ್ಲಿ ಗರಿಷ್ಠ 80 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಿಸಲು ನಿರ್ಧರಿಸಲಾಗಿದ್ದು, ಹೀಗಾಗಿ ಒಳಹರಿವು ಅಧಿಕ ಇರುವ ಕಾರಣ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಈಗಿನಿಂದಲೇ ನೀರನ್ನು ನದಿಗೆ ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.
ಕಳೆದ ವರ್ಷ ಜುಲೈ ಮೂರನೇ ವಾರ ಅಣೆಕಟ್ಟು ಬಹುತೇಕ ಭರ್ತಿಯ ಹಂತಕ್ಕೆ ಬಂದ ಕಾರಣ ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಹರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.