ADVERTISEMENT

1.64 ಲಕ್ಷ ಕ್ಯುಸೆಕ್ ನೀರು; ತುಂಗಭದ್ರಾ ನದಿಯಲ್ಲಿ ಪ್ರವಾಹ

ಐದು ಕುಟುಂಬ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 5:17 IST
Last Updated 10 ಆಗಸ್ಟ್ 2022, 5:17 IST
   

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದಿಂದ ಬುಧವಾರ ಒಂದೂವರೆ ಲಕ್ಷ ಕ್ಯುಸೆಕ್ ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಗದ್ದೆಗೂ ನೀರು ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗುವ ಸಾಧ್ಯತೆ ಇದೆ.

ಮಲೆನಾಡಿನ ಮಳೆ‌ ಆರ್ಭಟಕ್ಕೆ ಜಲಾಶಯಕ್ಕೆ ಪ್ರತಿ ಗಂಟೆಗೆ 1.43 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. 105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ದ ಜಲಾಶಯ ಈಗಾಗಲೇ ಸಂಪೂರ್ಣ ತುಂಬಿದೆ. ಅದರಿಂದಾಗಿ ಎಲ್ಲ 33 ಕ್ರಸ್ಟ್ ಗೇಟ್ ಗಳಿಂದ 1.63 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಯಾವುದೇ ಸಂದರ್ಭ ನದಿಗೆ ಎರಡು ಲಕ್ಷ ಕ್ಯುಸೆಕ್ ವರೆಗೆ ನೀರು ಹರಿಸಲಾಗುವುದು. ನದಿಗೆ ಹೊಂದಿಕೊಂಡಿರುವ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ಜನ ಓಡಾಡದಂತೆ ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು, ಮೆಹಬೂಬ್ ನಗರ, ಅನಂತಪುರ, ಕರ್ನೂಲ್ ಜಿಲ್ಲಾಡಳಿತಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಿದೆ.

ನದಿಯಲ್ಲಿ ಪ್ರವಾಹ ಬಂದಿರುವುದರಿಂದ ಬಳ್ಳಾರಿ ಜಿಲ್ಲೆ ಕಂಪ್ಲಿ ನದಿ ತೀರದ ಐದು ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ‌ ಸ್ಥಳಾಂತರಿಸಲಾಗಿದೆ.

ADVERTISEMENT

ಕಂಪ್ಲಿಯ ವೆಂಕಟರಮಣ ದೇವಸ್ಥಾನ, ಗಂಗಮ್ಮನ ಕಟ್ಟೆ ಸುತ್ತ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಐತಿಹಾಸಿಕ ಕುಮಾರರಾಮನ ಕೋಟೆ ಹೆಬ್ಬಾಗಿಲು ಜಲಾವೃತವಾಗಿದೆ. ಬನವಾಸಿ ರಸ್ತೆಯ ಕಿರು ಸೇತುವೆ ಮುಳುಗಡೆಯಾಗಿದ್ದರೂ ಜನ ಅದನ್ನು ಲೆಕ್ಕಿಸದೇ ಓಡಾಡುತ್ತಿದ್ದಾರೆ.

ಮಂಗಳವಾರವೇ ಕಂಪ್ಲಿ-ಗಂಗಾವತಿ, ಕಂಪ್ಲಿ-ಸಿರುಗುಪ್ಪ ಹಾಗೂ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು-ಗರ್ಭಗುಡಿ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಭತ್ತ, ಮೆಕ್ಕೆಜೋಳದ ಗದ್ದೆಗಳಲ್ಲಿ ನೀರು ಸಂಗ್ರಹವಾಗಿದ್ದು, ಪ್ರವಾಹ ತಗ್ಗದಿದ್ದರೆ ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ.

ಅನೇಕ ದಿನಗಳ ಹಿಂದೆಯೇ ಹಂಪಿ ಪುರಂದರದಾಸರ ಮಂಟಪ, ಕರ್ಮ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥ, ರಾಮ-ಲಕ್ಷ್ಮಣ ದೇವಸ್ಥಾನ, ಸಾಲು ಮಂಟಪಗಳು, ಸ್ನಾನಘಟ್ಟ ಮುಳುಗಡೆಯಾಗಿವೆ.

ತಗ್ಗಿದ ಮಳೆ:ಅವಳಿ ಜಿಲ್ಲೆಗಳಾದ ವಿಜಯನಗರ-ಬಳ್ಳಾರಿಯಲ್ಲಿ ಮಳೆ ತಗ್ಗಿದೆ. ಅನೇಕ ದಿನಗಳ ನಂತರ ಸೂರ್ಯ ಗೋಚರಿಸಿದ್ದಾನೆ. ಭಾರಿ ಪ್ರಮಾಣದಲ್ಲಿ ಗಾಳಿ ಬೀಸುತ್ತಿದ್ದು, ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ದೊಡ್ಡ ದೊಡ್ಡ ಅಲೆಗಳು ಏಳುತ್ತಿವೆ. ಅದನ್ನು ಕಣ್ತುಂಬಿಕೊಳ್ಳಲು ಜನ ಸೇರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.