ಹೊಸಪೇಟೆ (ವಿಜಯನಗರ): ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ (ಎಂಸಿಎಚ್) ಬುಧವಾರ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ನಿವಾಸಿ ಪರ್ವಿನ್ ಬಾನು ಅವರು ಅವಳಿ ಗಂಡುಮಕ್ಕಳನ್ನು ಹೆತ್ತಿದ್ದು, ಮಕ್ಕಳು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ತನಗೆ ಮಕ್ಕಳನ್ನು ನೋಡುವ ಭಾಗ್ಯ ಸಿಗಲಿಲ್ಲ ಎಂದು ಅವರು ರೋದಿಸುತ್ತಿದ್ದಾರೆ.
‘ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಿಲ್ಲ ಎಂಬ ಕಾರಣಕ್ಕೆ ನನ್ನನ್ನು ಇಲ್ಲಿಗೆ ಕಳುಹಿಸಿದ್ದರು. ಮಧ್ಯಾಹ್ನ 1.30ಕ್ಕೆ ಬಂದರೂ, ರಾತ್ರಿ 8ರವರೆಗೆ ನನ್ನನ್ನು ಬಂದು ವೈದ್ಯರು ನೋಡಿಲ್ಲ. ಸ್ಟಾಪ್ ನರ್ಸ್ ಮಾತ್ರ ಗಮನಿಸುತ್ತಿದ್ದರು’ ಎಂದು ಪರ್ವಿನ್ ಬಾನು ದೂರಿದರು.
ಅವರ ಪತಿ ಹುಸೇನ್ ಬಾಷಾ ಗದ್ಗದಿತರಾಗಿದ್ದರು. ‘ನಾನು ಆಟೊ ಚಾಲಕ. ಇಲ್ಲಿ ಎಲ್ಲ ವ್ಯವಸ್ಥೆ ಇದೆ, ಸಿಸೇರಿಯನ್ ಸಹ ಮಾಡಿ ಸುರಕ್ಷಿತವಾಗಿ ಹೆರಿಗೆ ಮಾಡಿಸುತ್ತಾರೆ ಎಂದು ಹೇಳಿದ್ದಕ್ಕೆ ಇಲ್ಲಿಗೆ ಕರೆತಂದಿದ್ದೆವು, ಆದರೆ ಏಳು ವರ್ಷದ ನಂತರ ಮಕ್ಕಳನ್ನು ನೋಡುವ ಅವಕಾಶ ನಮಗೆ ಸಿಗಲಿಲ್ಲ’ ಎಂದರು.
ಡಿಎಚ್‌ಒ ನಿರಾಕರಣೆ: ‘ತಾಯಿಗೆ ಸಹಜ ಹೆರಿಗೆಯೇ ಆಗಿದೆ, ಆದರೆ ಮಕ್ಕಳು ಹುಟ್ಟುತ್ತಲೇ ನೀಲಿ ಬಣ್ಣಕ್ಕೆ ತಿರುಗಿದ್ದರು. ಹೃದಯದ ತೊಂದರೆ ಇದ್ದರೆ ಇಂತಹ ಲಕ್ಷಣ ಕಾಣಿಸುತ್ತದೆ. ಒಂದು ಮಗು 1.04 ಕೆ.ಜಿ ಮತ್ತು ಇನ್ನೊಂದು ಮಗು 1.08 ಕೆ.ಜಿ ತೂಕವಿತ್ತು. ಇಬ್ಬರೂ ಮಕ್ಕಳ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು. ಒಂದು ಮಗು ಹುಟ್ಟಿದ ಕೆಲವೇ ಹೊತ್ತಲ್ಲಿ ಕೊನೆಯುಸಿರೆಳೆಯಿತು, ಇನ್ನೊಂದು ಮಗುವನ್ನು ತಕ್ಷಣ ಕೊಪ್ಪಳ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಆದರೆ ಅಲ್ಲಿ ಅದು ಮೃತಪಟ್ಟಿದೆ. ವೈದ್ಯರ ನಿರ್ಲಕ್ಷ್ಯ ಇಲ್ಲಿ ಇಲ್ಲ’ ಎಂದು ಡಿಎಚ್‌ಒ ಡಾ.ಎಲ್.ಆರ್.ಶಂಕರ್ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನವಜಾತ ಶಿಶುಗಳು 2 ಕೆ.ಜಿ.ಗಿಂತ ಕಡಿಮೆ ತೂಕ ಹೊಂದಿದ್ದರೆ ಅವುಗಳಿಗೆ ಅಪಾಯ ಇದ್ದೇ ಇರುತ್ತದೆ. ಒಂದು ಮಗುವಿನಂತೆ ಇನ್ನೊಂದು ಮಗುವಿಗೆ ಸಹ ಹೃದಯದ ತೊಂದರೆ ಇತ್ತೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ಮಗುವಾದರೂ ಉಳಿಯಬೇಕು ಎಂಬ ಪ್ರಯತ್ನವೂ ಫಲಿಸಲಿಲ್ಲ. ಈಚೆಗೆ ಇದೇ ಆಸ್ಪತ್ರೆಯಲ್ಲಿ ತ್ರಿವಳಿ ಜನನವಾಗಿತ್ತು, ಅವರೆಲ್ಲ ಆರೋಗ್ಯವಾಗಿದ್ದಾರೆ’ ಎಂದು ಅವರು ಹೇಳಿದರು.
‘ಬುಧವಾರ ನಾಲ್ಕೈದು ಸಿಸೇರಿಯನ್ ಶಸ್ತ್ರಚಿಕಿತ್ಸೆ ಪ್ರಕರಣಗಳಿದ್ದವು. ಗರ್ಭಿಣಿ ನಮ್ಮಲ್ಲಿಗೆ ಬಂದಾಗ ಅವರಿಗೆ ಹೆರಿಗೆ ನೋವು ಇರಲಿಲ್ಲ. ಹೀಗಾಗಿ ಹೆರಿಗೆ ಮಾಡಿಸದೆ ಇದ್ದೆವು. ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ತಪಾಸಣೆ ನಡೆಸಿ, ಸ್ಕ್ಯಾನಿಂಗ್ ಮಾಡಿಸಿ ಪರಿಶೀಲಿಸಿದೆವು. ಆಗ ಸಹಜ ಹೆರಿಗೆಯ ಲಕ್ಷಣ ಕಾಣಿಸಿತ್ತು, ಹೀಗಾಗಿ ಸಿಸೇರಿಯನ್ ಮಾಡಿಸಲಿಲ್ಲ. ಮಕ್ಕಳು ಹುಟ್ಟುವಾಗ ಬದುಕಿಯೇ ಇದ್ದರು. ಹುಟ್ಟಿದ ನಂತರ ದೇಹಗಳ ನೀಲಿ ಬಣ್ಣಕ್ಕ ತಿರುಗಿದೆ. ಸಿಸೇರಿಯನ್ ಮಾಡುತ್ತಿದ್ದರೂ ಈ ಸಮಸ್ಯೆಯಿಂದ ಮಕ್ಕಳು ಬದುಕುಳಿಯುವ ಸಾಧ್ಯತೆಯಂತೂ ಇರಲಿಲ್ಲ’ ಎಂದು ಹೆರಿಗೆ ತಜ್ಞ ಡಾ.ಚಂದ್ರಮೋಹನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.