ADVERTISEMENT

ಹರಪನಹಳ್ಳಿ: ಅಸಲಿ ಚಿನ್ನವೆಂದು ನಂಬಿಸಿ ₹12 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 15:45 IST
Last Updated 7 ಆಗಸ್ಟ್ 2023, 15:45 IST
ವಂಚನೆ
ವಂಚನೆ   

ಹರಪನಹಳ್ಳಿ (ವಿಜಯನಗರ ಜಿಲ್ಲೆ): ಅಸಲಿ ಬಂಗಾರವೆಂದು ನಂಬಿಸಿ ನಕಲಿ ಚಿನ್ನ ಕೊಟ್ಟು ಬೆಳಗಾವಿ ಮೂಲದ ವ್ಯಕ್ತಿಯೊಬ್ಬರಿಗೆ ₹ 12 ಲಕ್ಷ ವಂಚನೆ ಮಾಡಿರುವ ಘಟನೆಯ ಬಗ್ಗೆ ಭಾನುವಾರ ದೂರು ನೀಡಲಾಗಿದೆ.

ಬೆಂಗಳೂರಿನ ಕಗ್ಗಲೀಪುರದಲ್ಲಿ ವಾಸವಿರುವ ಬೆಳಗಾವಿ ಜಿಲ್ಲೆಯ ವಡೇರಹಟ್ಟಿ ಗ್ರಾಮದ ಲಕ್ಕಪ್ಪ ಹೋಳ್ಕರ್ ವಂಚನೆಗೆ ಒಳಗಾದವರು. ಕುಮಾರ ಮತ್ತು ಪ್ರಕಾಶಪ್ಪ ವಂಚಿಸಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ಕಪ್ಪ ಅವರಿಗೆ ಆರೋಪಿಗಳಾದ ಮಾರುತಿ ಮತ್ತು ಪ್ರಕಾಶಪ್ಪ ಆಗಾಗ ಕರೆ ಮಾಡಿ ಮಾತನಾಡುತ್ತಿದ್ದರು. ಜೂನ್ 28 ರಂದು ಕರೆ ಮಾಡಿದ್ದಾಗ ನಮ್ಮ ಮನೆ ಪಾಯ ತೆಗೆಯುವಾಗ ಹಳೆಯ ಚಿನ್ನ ಸಿಕ್ಕಿದೆ, ನಮಗೆ ಹಣ ಅಗತ್ಯವಿರುವುದರಿಂದ ಕಡಿಮೆ ಬೆಲೆಗೆ 3 ಕೆ.ಜಿ. ಬಂಗಾರ ಮಾರಾಟ ಮಾಡುವುದಾಗಿ ಆಮಿಷ ಒಡ್ಡಿದ್ದರು. ಇದನ್ನು ನಂಬಿದ ಲಕ್ಕಪ್ಪ ಸಂಬಂಧಿ ವಿಠಲ್ ಜೊತೆ ಆರೋಪಿಗಳು ತಿಳಿಸಿದ್ದ ತಾಲ್ಲೂಕಿನ ಹಾರಕನಾಳ ರಸ್ತೆ ಮೈಲಾರ ಲಿಂಗೇಶ್ವರ ದೇವಸ್ಥಾನದ ಬಳಿ ಜುಲೈ 1 ರಂದು ಆಗಮಿಸಿದ್ದರು. ಅಲ್ಲಿ ಆರೋಪಿಗಳು ಆರಂಭದಲ್ಲಿ ಎರಡು ಬಿಲ್ಲೆ ಕೊಟ್ಟು ಪರೀಕ್ಷೆ ಮಾಡಿಸಿಕೊಂಡು ಬರುವಂತೆ ತಿಳಿಸಿದರು. ಅದರಂತೆ ಪಟ್ಟಣಕ್ಕೆ ತೆರಳಿ ಪರೀಕ್ಷಿಸಿದಾಗ ಬಿಲ್ಲೆಗಳು ಅಸಲಿ ಎಂಬುದು ಗೊತ್ತಾಗಿದೆ.

ADVERTISEMENT

ಉಳಿದಿರುವ 3 ಕೆ.ಜಿ.ಯು ಅಸಲಿ ಎಂದು ನಂಬಿ ₹12 ಲಕ್ಷ ನಗದು ಹಣ ಕೊಟ್ಟು ಬಂಗಾರ ಪಡೆದುಕೊಂಡು ತಮ್ಮ ಗ್ರಾಮಕ್ಕೆ ತೆರಳಿದರು. ಅಲ್ಲಿಗೆ ಹೋಗಿ ಪರೀಕ್ಷಿಸಿದಾಗ ನಕಲಿ ಎಂಬುದು ಗೊತ್ತಾಗಿದ್ದು, ಆರೋಪಿಗಳನ್ನು ಪತ್ತೆ ಮಾಡುವಂತೆ ವಂಚನೆಗೆ ಒಳಗಾದವರು ದೂರು ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.