ADVERTISEMENT

ಸರ್ಕಾರಿ ಶಾಲೆಗಳಲ್ಲೂ ‘ಕೃತಕ ಬುದ್ಧಿಮತ್ತೆ’

ಐದು ಶಾಲೆಗಳಲ್ಲಿ ಪ್ರಯೋಗಾಲಯ ಸ್ಥಾಪನೆ: ಕೇಂದ್ರ ಸಚಿವೆ ನಿರ್ಮಲಾ ಚಾಲನೆ ಇಂದು

ಎಂ.ಜಿ.ಬಾಲಕೃಷ್ಣ
Published 20 ಡಿಸೆಂಬರ್ 2025, 4:25 IST
Last Updated 20 ಡಿಸೆಂಬರ್ 2025, 4:25 IST
ರಾಣೆಬೆನ್ನೂರು ತಾಲ್ಲೂಕಿನ ಕರ್ಲಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಲ್ಲದೇ ಪ್ರಸಕ್ತ ಸಾಲಿನಿಂದ ಸ್ಥಗಿತಗೊಂಡಿದ್ದು, ಅದೇ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ
ರಾಣೆಬೆನ್ನೂರು ತಾಲ್ಲೂಕಿನ ಕರ್ಲಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಲ್ಲದೇ ಪ್ರಸಕ್ತ ಸಾಲಿನಿಂದ ಸ್ಥಗಿತಗೊಂಡಿದ್ದು, ಅದೇ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ   

ಹೊಸಪೇಟೆ (ವಿಜಯನಗರ): ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂಚೂಣಿಯಲ್ಲೇ ಇರುವ ವಿಜಯನಗರ ಜಿಲ್ಲೆಯ ಮುಡಿಗೆ ಕೃತಕ ಬುದ್ಧಿಮತ್ತೆಯ (ಎಐ) ವಿಚಾರದಲ್ಲಿ ಗರಿಯೊಂದು ಮೂಡುವ ಲಕ್ಷಣ ಕಾಣಿಸಿದ್ದು, ತಾಲ್ಲೂಕಿನ ಐದು ಸರ್ಕಾರಿ ಶಾಲೆಗಳಿಗೆ ‘ವಿಜಯ ಪಥ’ ಎಐ ಪ್ರಯೋಗಾಲಯ ಲಭ್ಯವಾಗಿದೆ.

ಹೈದರಾಬಾದ್‌ ಮೂಲದ ಸಿಯೆಂಟ್‌ ಸಂಸ್ಥೆಯ ಸಹಯೋಗ ಪಡೆದುಕೊಂಡು ಸರ್ಕಾರಿ ಶಾಲೆಗಳ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಎಐ ಪರಿಚಯಿಸುವ ವಿನೂತನ ಪ್ರಯತ್ನ ಇದಾಗಿದ್ದು, ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೋಜನೆಗೆ ನಗರದ ಅಮರಾವತಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜ್‌ನಲ್ಲಿ ಶನಿವಾರ ಚಾಲನೆ ನೀಡಲಿದ್ದಾರೆ.

ಇಲ್ಲಿ ಎರಡು ಕೊಠಡಿಗಳಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಒಂದು ಪಿಯು ಕಾಲೇಜು ಘಟಕದ ಪ್ರೌಢಶಾಲೆಯಲ್ಲಿ ಹಾಗೂ ಇನ್ನೊಂದು ಬಸ್‌ನಿಲ್ದಾಣದ ಬಳಿಯಿಂದ ಸ್ಥಳಾಂತರಗೊಂಡ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿಭಾಗದಲ್ಲಿ. ಇಲ್ಲಿ ಒಟ್ಟು 11 ಕಂಪ್ಯೂಟರ್‌ಗಳನ್ನು ಎರಡೂ ಕೊಠಡಿಗಳಿಗೆ ಹಂಚಲಾಗಿದೆ. ಸಚಿವರಿಗೆ ವಿದ್ಯಾರ್ಥಿನಿಯರೇ ಎಐ ಕುರಿತು ಪಾಠ ಮಾಡಲಿದ್ದಾರೆ. ಸಿಯೆಂಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ಆರ್.ಮೋಹನ್ ರೆಡ್ಡಿ ಸಚಿವರ ಜತೆಗೆ ಇರುವ ನಿರೀಕ್ಷೆ ಇದೆ.

ADVERTISEMENT

‘ಪ್ರತಿ ಶಾಲೆಗೆ ₹5 ಲಕ್ಷ ವೆಚ್ಚದ ಕಂಪ್ಯೂಟರ್, ಇತರ ಸಾಮಗ್ರಿಗಳನ್ನು ಸಂಸ್ಥೆ ಒದಗಿಸಿದೆ. ಈಗಾಗಲೇ ತರಬೇತಿಯನ್ನೂ ನೀಡಿದೆ. ಮುಖ್ಯವಾಗಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಎಐ ಕುರಿತು ಪ್ರಾಥಮಿಕ ಹಂತದ ಮಾಹಿತಿ ನೀಡುವುದು ಇದರ ಉದ್ದೇಶ. ಸದ್ಯ ತಾಲ್ಲೂಕಿನಲ್ಲಿ ಐದು ಶಾಲೆಗಳಿಗೆ ಈ ಸೌಲಭ್ಯ ಒದಗಿಸಲಾಗಿದೆ’ ಎಂದು ಡಿಡಿಪಿಐ ಕಚೇರಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅಮರಾವತಿಯ ಸರ್ಕಾರಿ ಪದವಿಪೂರ್ವ ಕಾಲೇಜು, ಚಿತ್ತವಾಡ್ಗಿ, ಟಿ.ಬಿ.ಡ್ಯಾಂ, ಕಾರಿಗನೂರಿನ ಸರ್ಕಾರಿ ಪ್ರೌಢಶಾಲೆಗಳು ಹಾಗೂ ಜಂಬುನಾಥ ಹಳ್ಳಿಯ ಆದರ್ಶ ವಿದ್ಯಾಲಯಗಳಿಗೆ ಈ ಪ್ರಯೋಗಾಲಯ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಂಪಿ ಸಮೀಪ ಚಿಂತನ ಮಂಥನ

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಜಿಲ್ಲಾ ಪ್ರವಾಸದ ಮುಖ್ಯ ಉದ್ದೇಶವೇ ತಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಚಿಂತನ ಮಂಥನ ನಡೆಸುವುದು. ವರ್ಷಕ್ಕೆ ಒಮ್ಮೆ ಅವರು ದೇಶದ ಕೆಲವು ಆಯ್ದ ದೂರದ ಸ್ಥಳಗಳಲ್ಲಿ ಹಲವು ಐಎಎಸ್ ಅಧಿಕಾರಿಗಳನ್ನು ಕರೆಸಿಕೊಂಡು ಇಂತಹ ಸಭೆ ನಡೆಸುತ್ತಾರೆ. ಈ ಬಾರಿ ಅವರು ಮಲಪನಗುಡಿಯ ವಿಜಯಶ್ರೀ ಹೆರಿಟೇಜ್‌ನಲ್ಲಿ ಈ ಸಭೆಗಳನ್ನು ಡಿ.20 ಮತ್ತು 21ರಂದು ನಡೆಸಲಿದ್ದಾರೆ.

ಸಚಿವರು ಇದರ ಜತೆಗೆ ಕೆಲವೊಂದು ಇತರ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವರು. ಡಿ.20ರಂದು ಸಂಜೆ 7.30ಕ್ಕೆ ಹಂಪಿಯಲ್ಲಿ ಧ್ವನಿ ಮತ್ತು ಬೆಳಕು ಪ್ರದರ್ಶನ ವೀಕ್ಷಿಸಲಿದ್ದಾರೆ. ಡಿ.21ರಂದು ಬೆಳಿಗ್ಗೆ 10ಕ್ಕೆ ಕಮಲಾಪುರದ ‘ಹವಾಮ’ ಕಚೇರಿ ಆವರಣದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡುವರು. 10.30ಕ್ಕೆ ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಡಿ.22ರಂದು ಬೆಳಿಗ್ಗೆ 10.40ಕ್ಕೆ ತೋರಣಗಲ್‌ ವಿದ್ಯಾನಗರ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.