ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು, ಹೊಸಪೇಟೆಯಲ್ಲಿ ಮೆಗಾ ಡೇರಿ ನಿರ್ಮಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಇದೇ 17ರಂದು ಪ್ರತಿಭಟನೆ ನಡೆಸಲು ಜಿಲ್ಲೆಯ ಹಾಲು ಒಕ್ಕೂಟಗಳು ಹಾಗೂ ಪ್ರಗತಿಪರ ಸಂಘಟನೆಗಳು ನಿರ್ಧರಿಸಿವೆ.
ಅಖಿಲ ಕರ್ನಾಟಕ ರಾಜ್ಯ ಕಿಸಾಸ್ ಜಾಗೃತಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ್ ಕುಕ್ಕಪ್ಪಿ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿಯಲ್ಲಿ ಈಗ ಕೆಎಂಎಫ್ ಕಚೇರಿ ಇದೆ, ಆದರೆ ಆಡಳಿತಾತ್ಮಕವಾಗಿ ನಮಗೆ ಸಮಸ್ಯೆ ಮಾಡುತ್ತಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ 1.20 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ವಿಜಯನಗರ, ಕೊಪ್ಪಳ, ರಾಯಚೂರುಗಳಿಗೆ ಬಳ್ಳಾರಿ ದೂರ ಆಗುವ ಕಾರಣ ಹೊಸಪೇಟೆಯಲ್ಲೇ ಮೆಗಾಡೇರಿ ನಿರ್ಮಿಸಬೇಕಿದೆ ಎಂದರು.
‘ಕಳೆದ 40 ವರ್ಷಗಳಿಂದ ಒಕ್ಕೂಟದ ಕೇಂದ್ರ ಸ್ಥಾನ ಬಳ್ಳಾರಿಯಲ್ಲಿದೆ. ಬಳ್ಳಾರಿ ಜಿಲ್ಲೆಯ ನಾಲ್ಕು ಮಂದಿ ಒಕ್ಕೂಟದ ಅಧ್ಯಕ್ಷರಾಗಿ ಸುಮಾರು 25 ವರ್ಷಗಳಿಂದ ಅಧಿಕಾರ ಚಲಾಯಿಸಿದ್ದಾರೆ. ಬಳ್ಳಾರಿಯ ಜನಪ್ರತಿನಿಧಿಗಳು ಕೇವಲ ಅಧಿಕಾರ ಹೊಂದುವ ಸಲುವಾಗಿ ಹೋರಾಟ ನಡೆಸುತ್ತಿದ್ದಾರೆಯೇ ಹೊರತು ಒಕ್ಕೂಟದ ಅಭಿವೃದ್ಧಿಗೆ ಏನೂ ಕೆಲಸ ಮಾಡಿಲ್ಲ. 35 ವರ್ಷಗಳಿಂದ ಆಗದ ಕೆಲಸ ಕೇವಲ 5 ವರ್ಷದಲ್ಲಿ ಎಲ್.ಬಿ.ಪಿ.ಭೀಮಾ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಆಗಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಹಾಲು ಉತ್ಪಾದಕರಲ್ಲದವರು ‘ಭ್ರಷ್ಟಾಚಾರ ತೊಲಗಿಸಿ, ಒಕ್ಕೂಟ ಉಳಿಸಿ’ ಎಂದು ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ’ ಎಂದು ಅವರು ಹೇಳಿದರು.
ಒಕ್ಕೂಟದ ನಿರ್ದೇಶಕ ಎಚ್.ಮರುಳಸಿದ್ದಪ್ಪ ಮಾತನಾಡಿ, ಆಡಳಿತ ಮಂಡಳಿಯ ಅವಧಿ ಮುಗಿದಿದ್ದರೂ ಮುಂದುವರಿಯುವಂತೆ ಮಾಡಲಾಗಿದೆ, ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ಅಸಹಕಾರ ಇದೆ ಎಂದರು.
ರಬಕೊವಿಯ ಆಡಳಿತ ವ್ಯವಸ್ಥೆ, ವಿಜಯನಗರ ಜಿಲ್ಲೆಯ ಕೊಡುಗೆ ಮೊದಲಾದ ಅಂಶಗಳನ್ನು ರಾಜ್ಯದ ಮುಖ್ಯಮಂತ್ರಿ ಅವರ ಗಮನಕ್ಕೆ ತರುವ ಸಲುವಾಗಿ 17ರ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಗೆ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳು, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.
ವೆಂಕಟೇಶ್, ಜಿ.ಸೋಮಣ್ಣ, ಫಕೀರಪ್ಪ, ಉಷಾ, ಲಕ್ಷ್ಮಣ, ಕಾತೇಶಪ್ಪ, ಗೋಣಿಬಸಪ್ಪ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.