ADVERTISEMENT

ವಿಜಯನಗರ | ವಿಷ್ಣು ದೇಗುಲಗಳಲ್ಲಿ ಭಕ್ತಿ ಪರಾಕಾಷ್ಠೆ

ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 8:17 IST
Last Updated 31 ಡಿಸೆಂಬರ್ 2025, 8:17 IST
ಹೊಸಪೇಟೆಯ ವಾಸವಿ ದೇವಸ್ಥಾನದ ವೆಂಕಟೇಶ್ವರ ದೇವರ ಅಲಂಕಾರ
ಹೊಸಪೇಟೆಯ ವಾಸವಿ ದೇವಸ್ಥಾನದ ವೆಂಕಟೇಶ್ವರ ದೇವರ ಅಲಂಕಾರ   

ಹೊಸಪೇಟೆ: ವೈಕುಂಠ ಏಕಾದಶಿ ಪ್ರಯುಕ್ತ ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿಷ್ಣು ದೇವಾಲಯಗಳಿಗೆ ಮಂಗಳವಾರ ದೊಡ್ಡ ಸಂಖ್ಯೆಯಲ್ಲಿ ತೆರಳಿದ ಭಕ್ತರು, ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

‘ನಸುಕಿನಲ್ಲೇ, ಚಳಿಯನ್ನೂ ಲೆಕ್ಕಿಸದೆ ಭಕ್ತರು ದೇವಸ್ಥಾನಗಳಿಗೆ ಬಂದಿದ್ದಾರೆ. ಮಧ್ಯಾಹ್ನ 2 ಗಂಟೆಯವರೆಗೂ ಎಲ್ಲೆಡೆ ಜನಸಂದಣಿ ಇತ್ತು’ ಎಂದು ನಗರದ ವಡಕರಾಯ ದೇವಸ್ಥಾನದ ಅರ್ಚಕ ಅನಿಲ್ ಜೋಶಿ ಹೇಳಿದರು.

ವಡಕರಾಯ ದೇವಸ್ಥಾನದಲ್ಲಿ 700ಕ್ಕೂ ಅಧಿಕ ಅಭಿಷೇಕ ಹಾಗೂ ಅರ್ಚನೆ ನೆರವೇರಿಸಲಾಯಿತು. ಕಳೆದ ವರ್ಷ 120 ಅಭಿಷೇಕವಷ್ಟೇ ನಡೆದಿತ್ತು.

ADVERTISEMENT

ವಡಕರಾಯ ದೇವಸ್ಥಾನದಲ್ಲಿ  120 ಭಜನಾ ತಂಡಗಳಿಂದ ಅಖಂಡ ವಿಷ್ಣು ಸಹಸ್ರನಾಮ ಪಾರಾಯಣ ಮಂಗಳವಾರ ಬೆಳಿಗ್ಗೆ 6ಕ್ಕೆ ಆರಂಭವಾಗಿದ್ದು, ಬುಧವಾರ ಬೆಳಿಗ್ಗೆ ತನಕ ಮುಂದುವರಿಯಲಿದೆ. ಬುಧವಾರ ಬೆಳಿಗ್ಗೆಯಿಂದಲೇ ಶಾಸಕ ಎಚ್.ಆರ್‌. ಗವಿಯಪ್ಪ ಅವರು ದೇವಸ್ಥಾನದಲ್ಲಿ ಪ್ರಸಾದ ಭೋಜನದ ವ್ಯವಸ್ಥೆ ಮಾಡಿದ್ದಾರೆ.

ಅಮರಾವತಿ: ಅಮರಾವತಿಯ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಅತ್ಯಂತ ವಿಶೇಷವಾದ ಉತ್ತರ ದ್ವಾರದ ಮೂಲಕ ಭಗವಂತನ ದರ್ಶನ ಪಡೆಯಲು ಭಕ್ತರು ಗುಂಪು ಗುಂಪಾಗಿ ಬಂದರು. ಬೆಳಗಿನ ಜಾವ 3 ಗಂಟೆಯಿಂದಲೇ ಭಗವಂತನಿಗೆ ಪಂಚಾಮೃತ ಅಭಿಷೇಕಗಳು, ವಿಶೇಷ ಅರ್ಚನೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಎಸ್ಪಿ ಎಸ್.ಜಾಹ್ನವಿ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು.

ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಅನಿರೀಕ್ಷಿತವಾಗಿ ಹೆಚ್ಚಾಗಿದೆ, 13,000 ಲಡ್ಡುಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲ‌ ಭಕ್ತರು ಶಿಸ್ತಿನಿಂದ ಭಗವಂತನ ದರ್ಶನ ಪಡೆದು ತೀರ್ಥ ಪ್ರಸಾದವನ್ನು ಸ್ವೀಕರಿಸಿದ್ದಾರೆ’ ಎಂದರು.

ವಾಸವಿ: ಹಂಪಿ ರಸ್ತೆಯ ವಾಸವಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಕುಬಾಳು ರಾಜೇಂದ್ರ, ಕಾರ್ಯದರ್ಶಿ ಭೂಪಾಳ್‌ ಪ್ರಹ್ಲಾದ್‌, ವೆಂಕಟೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಮುದುಗಲ್‌ ಸತ್ಯನಾರಾಯಣ ಶೆಟ್ಟಿ ಇತರರು ಭಕ್ತರಿಗೆ ಸೂಕ್ತ ದರ್ಶನ ವ್ಯವಸ್ಥೆ ಕಲ್ಪಿಸಿದರು. 1,200ಕ್ಕಿಂತ ಅಧಿಕ ಅರ್ಚನೆ, ಅಭಿಷೇಕ ನೆರವೇರಿತು. 14,500ಕ್ಕೂ ಅಧಿಕ ಲಡ್ಡು ತಯಾರಿಸಲಾಗಿತ್ತು.

ನಗರದ ಮೇನ್ ಬಜಾರ್‌ನಲ್ಲಿರುವ ವೆಂಕಟೇಶ್ವರ ದೇವಸ್ಥಾನ, ಪಾಂಡುರಂಗ ದೇವಸ್ಥಾನ, ರಾಣಿಪೇಟೆಯ ಶ್ರೀರಾಮ ದೇವಸ್ಥಾನಗಳಲ್ಲಿ ಸಹ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಹೊಸಪೇಟೆಯ ವಡಕರಾಯ ದೇವಸ್ಥಾನದಲ್ಲಿರುವ ವೆಂಕಟೇಶ್ವರ ಸ್ವಾಮಿಗೆ ಶಾಸಕ ಎಚ್.ಆರ್‌. ಗವಿಯಪ್ಪ ಪ್ರಾರ್ಥನೆ ಸಲ್ಲಿಸಿದರು
ಹೊಸಪೇಟೆಯ ಅಮರಾವತಿಯ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು –ಪ್ರಜಾವಾಣಿ ಚಿತ್ರ/ ಲವ ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.