ADVERTISEMENT

ವೆನೆಜುವೆಲಾ ಮೇಲೆ ಅಮೆರಿಕ ಆಕ್ರಮಣ ಖಂಡಿಸಿ ಹೊಸಪೇಟೆಯಲ್ಲಿ ಸಿಪಿಎಂ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 13:00 IST
Last Updated 4 ಜನವರಿ 2026, 13:00 IST
   

ಹೊಸಪೇಟೆ (ವಿಜಯನಗರ): ವೆನೆಜುವೆಲಾ ಮೇಲೆ ದಾಳಿ ನಡೆಸಿದ ಅಮೆರಿಕದ ಕ್ರಮವನ್ನು ಖಂಡಿಸಿ ಸಿಪಿಎಂ ವತಿಯಿಂದ ಭಾನುವಾರ ಇಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು.ಬಸವರಾಜ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಎನ್.ಯಲ್ಲಾಲಿಂಗ, ಬಿ.ಮಾಳಮ್ಮ, ಎಂ.ಗೋಪಾಲ, ಎಂ.ಜಂಬಯ್ಯ ನಾಯಕ, ವಿ.ಸ್ವಾಮಿ, ಬಿ.ಮಹೇಶ, ಸಿದ್ದಲಿಂಗಪ್ಪ, ಸುಂಕಪ್ಪ, ಮಂಜುನಾಥ ಡಗ್ಗಿ ಇತರರು ಇದ್ದರು.

ಪಕ್ಷದ ವತಿಯಿಂದ ಬಳಿಕ ಅಧಿಕೃತ ಹೇಳಿಕೆಯನ್ನೂ ಹೊರಡಿಸಲಾಯಿತು. ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅದರಲ್ಲಿ ತಿಳಿಸಲಾಗಿದೆ.

ADVERTISEMENT

‘ವೆನೆಜುವೆಲಾ ವಿರುದ್ಧ ಅಮೆರಿಕದ ಆಕ್ರಮಣ ಮತ್ತು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್‌ ಅವರ ಅಪಹರಣವನ್ನು ಎಡಪಕ್ಷಗಳು ಬಲವಾಗಿ ಖಂಡಿಸಿವೆ. ಇದು ವಿಶ್ವಸಂಸ್ಥೆಯ ಚಾರ್ಟರ್‌ ಅನ್ನು ಸ್ಪಷ್ಟವಾಗಿ ಉಲ್ಲಂಘಿಸುವ, ಸಾರ್ವಭೌಮ ರಾಷ್ಟ್ರದ ಮೇಲೆ ನಡೆಸಿರುವ ದಾಳಿ’ ಎಂದು ಎಡಪಕ್ಷಗಳ ಪ್ರಧಾನ ಕಾರ್ಯದರ್ಶಿಗಳ ಜಂಟಿ ಹೇಳಿಕೆ ತಿಳಿಸಿದೆ.

ಡಿವೈಎಫ್‌ಐ ಖಂಡನೆ

ಅಮೆರಿಕದ ವರ್ತನೆಯನ್ನು ಡಿವೈಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ ಖಂಡಿಸಿದ್ದು, ವೆನೆಜುವೆಲಾ ವಿರುದ್ಧದ ಪ್ರಸ್ತುತ ಆಕ್ರಮಣವು ಬಲವಂತವಾಗಿ ಆಡಳಿತ ಬದಲಾವಣೆಯನ್ನು ಹೇರುವ ಮತ್ತು ದೇಶದ ಆಯಕಟ್ಟಿನ ಸಂಪನ್ಮೂಲಗಳನ್ನು, ವಿಶೇಷವಾಗಿ ತೈಲ ಮತ್ತು ಖನಿಜಗಳನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಬಾಹ್ಯ ಹಸ್ತಕ್ಷೇಪವಿಲ್ಲದೆ ತಮ್ಮ ಸ್ವಂತ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಹಕ್ಕನ್ನು ರಕ್ಷಿಸಿಕೊಳ್ಳುವ ಹೋರಾಟದಲ್ಲಿ ಡಿವೈಎಫ್ಐ ವೆನೆಜುವೆಲಾದ ಜನರು ಮತ್ತು ಅವರ ಕಾನೂನುಬದ್ಧ ಸರ್ಕಾರದೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.