ಹೊಸಪೇಟೆ/ ಮರಿಯಮ್ಮನಹಳ್ಳಿ: ತೆರಿಗೆ ಬಾಕಿಗೆ ಸಂಬಂಧಿಸಿದಂತೆ ಇಲ್ಲಿಗೆ ಸಮೀಪದ ಬಿಎಂಎಂ ಇಸ್ಪಾತ್ ಕಂಪನಿ ಮತ್ತು 114-ಡಣಾಪುರ ಗ್ರಾಮ ಪಂಚಾಯಿತಿ ನಡುವಿನ ಜಟಾಪಟಿ ಸೋಮವಾರ ನಡೆದ ಕೆಡಿಪಿ ಸಭೆಯ ಮೂಲಕ ಹೊಸ ತಿರುವು ಪಡೆದಿದ್ದು, ಅಂತಿಮ ನೋಟಿಸ್‌ಗೆ ಸ್ಪಂದಿಸಿ ತೆರಿಗೆ ಕಟ್ಟದಿದ್ದಲ್ಲಿ ಕಂಪನಿಯನ್ನು ಮುಚ್ಚುವ ಎಚ್ಚರಿಕೆ ನೀಡಲಾಗಿದೆ.
‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸುದ್ದಿಯನ್ನು ಉಲ್ಲೇಖಿಸಿದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುರಿ ಶಿವಮೂರ್ತಿ, ತಕ್ಷಣ ತೆರಿಗೆ ವಸೂಲಿಗೆ ಆಗ್ರಹಿಸಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ ಅವರಿಂದ ವಿವರಣೆ ಕೇಳಿದರು. ಕಂಪನಿ ಈಗಾಗಲೇ ₹1.25 ಕೋಟಿಯಷ್ಟು ತೆರಿಗೆ ಪಾವತಿಸಿದೆ ಎಂದರು.
‘ಒಂದು ರೂಪಾಯಿಯನ್ನೂ ಕಟ್ಟಿಲ್ಲ’ ಎಂದು ಶಿವಮೂರ್ತಿ ಅವರು ಹೇಳಿದಾಗ ಸಚಿವರು ಮಧ್ಯಪ್ರವೇಶಿಸಿ, ಅಧಿಕಾರಿ ಸುಳ್ಳು ಹೇಳಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪಿಡಿಒ ಅವರನ್ನು ಅಮಾನತು ಮಾಡಿದ್ದಕ್ಕೆ ಸಹ ಸಚಿವರು ಗರಂ ಆದರು.
ಕೊನೆಗೆ, ‘ಕಂಪನಿಗೆ ಅಂತಿಮ ನೋಟಿಸ್ ನೀಡಿ, ಅದಕ್ಕೆ ಸ್ಪಂದಿಸದಿದ್ದರೆ ಕಂಪನಿಯನ್ನು ಮುಚ್ಚುವ ನಿರ್ಧಾರ ಕೈಗೊಳ್ಳಿ’ ಎಂದು ಸಚಿವರು ಖಡಕ್ ಸೂಚನೆ ನೀಡಿದರು.
ಶಾಸಕ ನೇಮಿರಾಜ ನಾಯ್ಕ್ ಮಾತನಾಡಿ, ‘ಕಂಪನಿಯಿಂದ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು, ತೆರಿಗೆ ಪಾವತಿಸುವಲ್ಲಿ ಅವರು ಕಣ್ಣಾಮುಚ್ಚಾಲೆ ಆಡುವಂತಿಲ್ಲ. ತಕ್ಷಣ ತೆರಿಗೆ ಪಾವತಿಸಲೇಬೇಕು. ಸ್ಮಯೋರ್ ಕಂಪನಿಯಿಂದಲೂ ತೆರಿಗೆ ಬಾಕಿ ಇರುವ ಆರೋಪ ಇದೆ’ ಎಂದರು.
ಮತ್ತೊಂದೆಡೆಯಲ್ಲಿ ಹಾಲಿ ಪಿಡಿಒ ಸೈಯದ್ ಮನ್ಸೂರ್ ಹುಸೇನ್ ಅವರು ಶುಕ್ರವಾರ ಮೂರು ದಿನದ ಹಿಂದೆಯಷ್ಟೇ ಅಂಚೆ ಮೂಲಕ 6ನೇ ನೋಟೀಸ್ ಅನ್ನು ಕಂಪನಿಗೆ ನೀಡಿದ್ದು, ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಸ್ಪಂದಿಸದಿದ್ದರೆ 2 ವರ್ಷದ ತೆರಿಗೆ ಪಾವತಿಸುವಲ್ಲಿ ವಿಳಂಬವಾಗಿದ್ದಕ್ಕೆ ₹16.68 ಕೋಟಿಗೆ ಶೇ 5ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕೆಂದು ಸೂಚಿಸಿದ್ದಾರೆ.
ಕಂಪನಿಯ ನಿಲುವು:
ನ.29ರಂದು ಕಂಪನಿ ಪಂಚಾಯಿತಿಗೆ ಪತ್ರ ಬರೆದು, 2023-24ನೇ ಸಾಲಿನ ತೆರಿಗೆ ಮೊತ್ತ ₹90,42.996 ಮತ್ತು 2024-25ನೇ ಸಾಲಿನ ತೆರಿಗೆ ಮೊತ್ತ ₹90,42,996 ಸೇರಿದಂತೆ ಒಟ್ಟಾರೆ ₹1,80,85,992 ಚೆಕ್ ಮೂಲಕ ಸಲ್ಲಿಸಲು ಮುಂದಾಗಿತ್ತು. ಆದರೆ ಸದಸ್ಯರು ಪೂರ್ತಿ ತೆರಿಗೆ ಹಣ ಪಾವತಿಸುವಂತೆ ಒತ್ತಾಯಿಸಿ ಕಂಪನಿಯ ಅಧಿಕಾರಿಗಳನ್ನು ವಾಪಸ್ ಕಳುಹಿಸಿದ್ದರು.
ಸದಸ್ಯರ ಪರ-ವಿರೋಧ: ಗ್ರಾಮ ಪಂಚಾಯಿತಿಯ 20 ಸದಸ್ಯರು ಕಂಪನಿ ₹2.50 ಕೋಟಿ ಪಾವತಿಸುವ ಪರ ಇದ್ದರೆ, ಇತರ 9 ಮಂದಿ ಎಲ್ಲಾ ₹16 ಕೋಟಿಯನ್ನೂ ಕಂಪನಿ ಕಟ್ಟಬೇಕು ಎಂದು ಒತ್ತಾಯಿಸಿದ್ದಾರೆ. ಹೀಗಾಗಿ ಕಳೆದ 9 ತಿಂಗಳಿನಿಂದ ತೆರಿಗೆ ಬಾಕಿಗೆ ಸಂಬಂಧಿಸಿದಂತೆ ಜಟಾಪಟಿ ಮುಂದುವರಿದಿದೆ.
ಒಂದು ಕಂತು ತೆರಿಗೆ ಪಾವತಿಸಿದ್ದು ನಿಜವೇ?
ಜಿಲ್ಲಾ ಪಂಚಾಯಿತಿ ಸಿಇಒ ಅವರು ಒಂದು ಕಂತಿನ ತೆರಿಗೆಯನ್ನು ಕಂಪನಿ ಪಾವತಿಸಿದೆ ಎಂದು ಹೇಳುತ್ತಿದ್ದರೂ ‘ಪ್ರಜಾವಾಣಿ’ಗೆ ದೊರೆತ ಮಾಹಿತಿ ಪ್ರಕಾರ ಮತ್ತು ಕುರಿ ಶಿವಕುಮಾರ್ ಹೇಳುವಂತೆ ಒಂದು ರೂಪಾಯಿ ಸಹ ಸಂದಾಯವಾಗಿಲ್ಲ. ಈ ನಿಟ್ಟಿನಲ್ಲಿ ಜ. 22ರಂದು ಪಿಡಿಒ ಅವರು ಕಂಪನಿಗೆ ಬರೆದ ಪತ್ರದ ಪ್ರತಿ ‘ಪ್ರಜಾವಾಣಿ’ ಬಳಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.