ಹೊಸಪೇಟೆ (ವಿಜಯನಗರ): ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ತಮ್ಮ ಸ್ವಂತ ಅನುದಾನದಲ್ಲಿ ₹5 ಸಾವಿರವನ್ನು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಗೆ ನೀಡಬೇಕೆಂಬ ಆದೇಶವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಕ್ಷೇಮಾಭಿವೃದ್ಧಿ ಸಂಘ ವಿರೋಧಿಸುತ್ತದೆ ಎಂದು ಸಂಘದ ಅಧ್ಯಕ್ಷ ಸಣ್ಣಕ್ಕಿ ಲಕ್ಷ್ಮಣ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಕೌಟ್ಸ್ ಒಂದು ಅತ್ಯುತ್ತಮ ಸೇವಾ ಸಂಸ್ಥೆ ಎಂಬುದರಲ್ಲಿ ಎರಡು ಮಾತಿಲ್ಲ, ಅದಕ್ಕೆ ಅನುದಾನ ನೀಡುವುದಕ್ಕೂ ಅಭ್ಯಂತರ ಇಲ್ಲ, ಆದರೆ ಅನುದಾನದ ಬಳಕೆ ವಿಚಾರದಲ್ಲಿ ಸರಿಯಾದ ಮಾರ್ಗಸೂಚಿ ಬೇಕು, ಅದರ ಹೊರತಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಏಕಾಏಕಿಯಾಗಿ ಆದೇಶ ಹೊರಡಿಸಿದರೆ ಅದನ್ನು ಜಾರಿಗೆ ತರುವುದು ಕಷ್ಟವಾಗುತ್ತದೆ ಎಂದರು.
‘ಸರ್ಕಾರದ ಆದೇಶದಂತೆ ರಾಜ್ಯದ ಎಲ್ಲ ಜಿಲ್ಲಾ 5,951 ಗ್ರಾಮ ಪಂಚಾಯಿತಿಗಳಿಂದ ತಲಾ ₹5 ಸಾವಿರದಂತೆ ಹಣ ಪಡೆದರೆ ಸ್ಕೌಟ್ಸ್‌ಗೆ ₹2.97 ಕೋಟಿ ಹಣ ಸಂಗ್ರಹವಾಗುತ್ತದೆ. ಹೀಗೆ ವಂತಿಕೆ ಹಣ ಸಂಗ್ರಹಿಸುವುದು ಪಂಚಾಯತ್ ರಾಜ್ ಕಾಯ್ದೆಯ 241 ಮತ್ತು 242 ಸೆಕ್ಷನ್‌ಗಳ ಉಲ್ಲಂಘನೆಯಾಗುತ್ತದೆ. ಕೆಲವು ವರ್ಷಗಳಿಂದ ಪಂಚಾಯತ್‌ರಾಜ್ ಆಯುಕ್ತಾಲಯದ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳನ್ನು ಹಣ ನೀಡುವ ಶಾಖಾ ಕಚೇರಿಗಳಂತೆ ಮಾಡಿಕೊಂಡು ಸಂಸ್ಥೆಗಳಿಗೆ ವಂತಿಗೆ ಹಣ ನೀಡಿ ಎಂದು ಆದೇಶ ಹೊರಡಿಸುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ’ ಎಂದು ಲಕ್ಷ್ಮಣ ಹೇಳಿದರು.
ಸ್ಕೌಟ್ಸ್ ವಿಚಾರದಲ್ಲಿ ನೀಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ ಅವರು, ಇನ್ನು ಮುಂದೆ ಇಂತಹ ಅವೈಜ್ಞಾನಿಕ ಆದೇಶ ಹೊರಡಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕೂಸಿನ ಮನೆ ವಿಚಾರದಲ್ಲೂ ಗ್ರಾಮ ಪಂಚಾಯಿತಿಗಳಿಗೆ ಹೊರೆ ಇಳಿಸುವ ಕೆಲಸವಾಗುತ್ತಿಲ್ಲ. ಉದ್ಯೋಗ ಖಾತ್ರಿ ಕೆಲಸ ನಡೆಯದೆ ಇದ್ದರೂ ಕೂಸಿನ ಮನೆ ಮುಂದುವರಿಸುವ ಒತ್ತಡ ಹೇರಲಾಗುತ್ತಿದೆ, ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ನರೇಗಾ ಕೆಲಸ ಮಾಡಿಸುವ ವ್ಯವಸ್ಥೆಯೂ ರಾಜ್ಯದಲ್ಲಿಲ್ಲ, ಗ್ರಾಮೀಣ ಭಾಗದಲ್ಲಿ ಎಂತಹ ಕೆಲಸ ಆಗುತ್ತಿದೆ, ಹೇಗೆ ಇಲಾಖೆ ವರ್ತಿಸಬೇಕು ಎಂಬ ನಿಟ್ಟಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಸ್ವಲ್ಪ ತಳಮಟ್ಟಕ್ಕೆ ಇಳಿದು ವಿಚಾರಿಸುವ ಅಗತ್ಯ ಇದೆ ಎಂದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದ ನಾಯ್ಕ, ಮುಖಂಡರಾದ ಎಂ.ಲಕ್ಷ್ಮಣ, ಪಿ.ತಾಯಪ್ಪ, ದೊರೈರಾಜ್, ವೆಂಕಟೇಶ್ ನಾಯಕ, ವಿಜಯಕುಮಾರ್ ತಳವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.