ADVERTISEMENT

ವಿಜಯನಗರ: ಶಿಲಾಯುಗ ಕಾಲದ ಅವಶೇಷ ಪತ್ತೆ

ಕೂಡ್ಲಿಗಿ–ಮೊಳಕಾಲ್ಮೂರು ತಾಲ್ಲೂಕುಗಳ ಗಡಿಯ ಮೀನಕೆರೆ ಗ್ರಾಮ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 23:00 IST
Last Updated 30 ಸೆಪ್ಟೆಂಬರ್ 2025, 23:00 IST
ಕೂಡ್ಲಿಗಿ ತಾಲ್ಲೂಕಿನ ಮೀನಕೆರೆ ಗ್ರಾಮದಲ್ಲಿ ಪತ್ತೆಯಾದ ಶಿಲಾಯುಗ ಕಾಲದ ಆದಿಮಾನವರು ಬಳಸಿದ ಶಿಲಾ ಆಯುಧಗಳು ಮತ್ತು ಉಪಕರಣಗಳು 
ಕೂಡ್ಲಿಗಿ ತಾಲ್ಲೂಕಿನ ಮೀನಕೆರೆ ಗ್ರಾಮದಲ್ಲಿ ಪತ್ತೆಯಾದ ಶಿಲಾಯುಗ ಕಾಲದ ಆದಿಮಾನವರು ಬಳಸಿದ ಶಿಲಾ ಆಯುಧಗಳು ಮತ್ತು ಉಪಕರಣಗಳು     

ಕೂಡ್ಲಿಗಿ: ತಾಲ್ಲೂಕಿನ ಮೀನಕೆರೆ ಗ್ರಾಮದಲ್ಲಿ ಶಿಲಾಯುಗ ಕಾಲದ ಆದಿಮಾನವರು ಬಳಸಿದ ಶಿಲಾ ಉಪಕರಣಗಳು ಹಾಗೂ ನವ ಶಿಲಾಯುಗ ಕಾಲದ ಉಜ್ಜಿ ನಯಗೊಳಿಸಿದ ಕೈಗೊಡಲಿ, ಮಡಿಕೆ ಚೂರುಗಳು, ಬೃಹತ್ ಕುಟ್ಟು ಚಿತ್ರಗಳು ಪತ್ತೆಯಾಗಿವೆ. 

ಈ ಸ್ಥಳ ಹಗರಿ ನದಿ ದಂಡೆಯ ಮೇಲಿದ್ದು, ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಅಂಚಿನಲ್ಲಿದೆ. ವಿಜಯನಗರ ತಿರುಗಾಟ ಸಂಶೋಧನಾ ತಂಡ ಈ ಶೋಧ ನಡೆಸಿದೆ.

ಗೂಳಿ, ಹಸು ಕುಟ್ಟುಚಿತ್ರ: ಮೀನಕೆರೆ ಗ್ರಾಮದ ನೈರುತ್ಯ ಭಾಗಕ್ಕಿರುವ ಕೆಂಗಮಲೆಯಪ್ಪನವರ ಹೊಲದಲ್ಲಿ ನವಶಿಲಾಯುಗ ಕಾಲಕ್ಕೆ ಸೇರಿದ (ಕ್ರಿ. ಪೂ. 3,000ಕ್ಕೆ ಹಿಂದೆ) ಹುಟ್ಟು ಕಲ್ಲುಬಂಡೆಯನ್ನು ಚಪ್ಪಟೆಯಾಕಾರ ಮಾಡಿ ಆ ಕಲ್ಲುಬಂಡೆಗೆ ಕುಟ್ಟಿ ಬೃಹತ್ ಗೂಳಿ ಮತ್ತು ಅದರ ಬಳಿಯಲ್ಲಿಯ ಗುಂಡು ಕಲ್ಲಿಗೆ ಕುಟ್ಟಿ ಹಸುವಿನ ಚಿತ್ರವನ್ನು ಬಿಡಿಸಿದ್ದನ್ನು ಮೀನಕೆರೆ ಗ್ರಾಮದ ಸಂಶೋಧಕ ಕಲಂದರ್ ಗಮನಿಸಿದ್ದರು. ಅವರ ಸಹಕಾರದಿಂದ ವಿಜಯನಗರ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಇತಿಹಾಸದ ಪುಟಗಳು ಮತ್ತಷ್ಟು ತೆರೆದುಕೊಂಡವು ಎಂದು ತಂಡದ ಸದಸ್ಯರೂ ಆಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಗೋವಿಂದ, ದೃಶ್ಯಕಲಾ ವಿಭಾಗದ ಪ್ರೊ.ಕೃಷ್ಣೇಗೌಡ ಹೇಳಿದರು.

ADVERTISEMENT

ಮಾನವಾಕೃತಿ ಕಲ್ಲು: ಮೀನಕೆರೆ ಗ್ರಾಮದ ವಾಯುವ್ಯ ದಿಕ್ಕಿಗೆ ಇರುವ ಕುಮತಿ ಗ್ರಾಮದಲ್ಲಿ ಬೃಹತ್ ಗಾತ್ರದ ಮಾನವಾಕೃತಿ ಕಲ್ಲುಗಳಿವೆ. ಅವು ಈಗಾಗಲೇ ಬೆಳಕಿಗೆ ಬಂದಿವೆ.

‘ಇವುಗಳಿಂದ ಶಿಲಾಯುಗ ಕಾಲದ ಆದಿಮಾನವನ ಸಂಸ್ಕೃತಿ ತಿಳಿಯುವ ಯತ್ನಿಸಬಹುದು. ಇಲ್ಲಿ ಏಳು ಕಲ್ಲುಗಳಿದ್ದವು, ಎರಡು ಉಳಿದಿವೆ. ಸಂರಕ್ಷಣೆ ಅಗತ್ಯ ಇದೆ’ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ.ಎಚ್. ತಿಪ್ಪೇಸ್ವಾಮಿ ಹೇಳಿದರು.

ಕೂಡ್ಲಿಗಿ ತಾಲ್ಲೂಕಿನ ಮೀನಕೆರೆ ಗ್ರಾಮದಲ್ಲಿ ಪತ್ತೆಯಾದ ಗೂಳಿಯ ಕುಟ್ಟುಚಿತ್ರ

- 3 ಅಡಿ ಎತ್ತರದ ಗೂಳಿ ಚಿತ್ರ ಕುಟ್ಟಿ ರಚಿಸಲಾದ ಗೂಳಿ ಚಿತ್ರವು 3 ಅಡಿ ಎತ್ತರ 3 ಅಡಿ ‌ಅಗಲವಿದೆ. ಕೊಂಬುಗಳು ಬಾಗಿದಂತಿವೆ. ಮುಂದಿನ ಎರಡು ಕಾಲು ನೆಟ್ಟಗೆ ನಿಂತಂತಿವೆ. ಹಿಂದಿನ ಕಾಲುಗಳು ಮಡಚಿದಂತೆ ಕಾಣಿಸುತ್ತವೆ. ಗೂಳಿಯು ಎದುರಿನ  ಪ್ರಾಣಿಯ ಜೊತೆಗೆ ಕಾದಾಟ ಮಾಡುತ್ತಿರುವಂತೆ ಇಲ್ಲವೇ ಹೌಹಾರಿದಂತೆ ಕಾಣಿಸುತ್ತದೆ. ಗುಂಡುಕಲ್ಲನ್ನು ಚಪ್ಪಟೆಯಾಕಾರದಲ್ಲಿ ಮಾಡಿಕೊಂಡು ಗೂಳಿ ಚಿತ್ರವನ್ನು ಕುಟ್ಟಿರಬೇಕು ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.