ಹೂವಿನಹಡಗಲಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಇದೀಗ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಜನಸಾಗರವನ್ನೇ ನೋಡಬಹುದಾಗಿದ್ದು, ವಿಜಯನಗರ ಜಿಲ್ಲೆಯ ಮಟ್ಟಿಗೆ ಆ ಕ್ಷಣ ಶುಕ್ರವಾರ ಸಂಜೆ ಕಾರಣಿಕೋತ್ಸವ ರೂಪದಲ್ಲಿ ಕಾಣಿಸಿತು.
ದೇವಸ್ಥಾನದ ಒಳಗೆ ದೋಣಿ ತುಂಬಿಸಿ ಹರಕೆ ತೀರಿಸುವ ಭಕ್ತರ ಭಕ್ತಿ, ಭಾವ, ದೀಡು ನಮಸ್ಕಾರದ ಪರಾಕಾಷ್ಠೆ, ಮೈಮೇಲೆ ಚಾಟಿ ಬಡಿದುಕೊಳ್ಳುವ ಕುದುರೆಕಾರ ಸೇವೆ, ದೀವಟಿಗೆ ಹಿಡಿಯವ ಉತ್ಸಾಹ ... ನಾನಾ ಬಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಭಕ್ತರ ನಡುವೆ ಕಾರಣಿಕ ನುಡಿ ಕೇಳಲು ಜನ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸೇರಿದ್ದರು. ಅಲ್ಲಿ ತ್ರಿವೇಣಿ ಸಂಗಮದಲ್ಲಿ ಮುಳುಗೇಳುವ ದೃಶ್ಯ ಇರಲಿಲ್ಲ, ಆದರೆ ಮೈಲಾರ ಸ್ವಾಮಿಯ ವಾಣಿ ಆಲಿಸಿ ಮೈ ಮನವನ್ನು ಶುದ್ಧಿಗೊಳಿಸುವ ತವಕ ಇತ್ತು.
'ತುಂಬಿದ ಕೊಡ ತುಳುಕಿತಲೇ ಪರಾಕ್’ ಎಂಬ ಕಾರಣಿಕ ನುಡಿಯನ್ನು ಆಲಿಸಿದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಜನರು ಮಂಜಿನಂತೆ ಮಾಯವಾದರು. ತಮ್ಮ ತಮ್ಮ ವಾಹನಗಳಲ್ಲಿ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದ ದೃಶ್ಯ ಜನಪ್ರವಾಹ ಅಂದರೆ ಇದೇ ಎಂಬುದನ್ನು ಬೊಟ್ಟುಮಾಡಿ ತೋರಿಸುವಂತಿತ್ತು.
ಕಾರ್ಣಿಕ ನುಡಿ ಮುಗಿಯುತ್ತಿದ್ದಂತೆ ವಿವಿಧ ಕಡೆಗಳಿಂದ ಡೆಂಕನಮರಡಿ ಪರಿಸರದಲ್ಲಿ ಬೀಡು ಬಿಟ್ಟಿದ್ದ ಭಕ್ತರು ಅವರು ಕುಳಿತ ಜಾಗದಲ್ಲಿ ಕಲ್ಲುಗಳನ್ನು ಪೋಣಿಸಿದರು. ಕೆಲವರು ಕಟ್ಟಿಗೆಯ ಚೂರುಗಳನ್ನು ಜೋಡಿಸಿಟ್ಟರು. ಕೆಲವರು ಬಿಲ್ಲುಗಳಿಂದ ಕಿರು ಜೋಕಾಲಿಯಂತೆ ಮಾಡಿ, ಅದರೊಳಗೆ ಬಾಳೆಹಣ್ಣು ಇಟ್ಟು, ಅರಿಸಿನ ಹಾಕಿ ಪೂಜಿಸಿ, ತೂಗಿದರು.
ಮೈಲಾರಲಿಂಗನ ಆಶೀರ್ವಾದದಿಂದ ಮನೆಯಿಲ್ಲದವರಿಗೆ ಮನೆಯಾಗಲಿ, ಮಕ್ಕಳಾಗದಿದ್ದವರಿಗೆ ಮಕ್ಕಳಾಗಲಿ, ಜೀವನದಲ್ಲಿ ಯಶಸ್ಸು ಸಿಗಲಿ, ಉದ್ಯಮ ಬೆಳೆಯಲಿ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲಿ, ಉತ್ತಮ ವಧು–ವರ ಸಿಗಲಿ ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹರಕೆ ತೀರಿಸಿದರು.
ಮತ್ತೊಂದೆಡೆಯಲ್ಲಿ ದೇವಸ್ಥಾನದಲ್ಲೂ ಭಕ್ತರ ದಟ್ಟಣೆ ಕಾಣಿಸಿತು. ಕೆಲ ಭಕ್ತರು ಗೊರವಪ್ಪನ ರೀತಿಯಲ್ಲಿ ವೇಷಧಾರಿಗಳಾಗಿ ಕಂಗೊಳಿಸಿದರು. ಮತ್ತೆ ಕೆಲವರು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ಓಡಾಡಿದರು. ಎಲ್ಲರ ಹಣೆ ಅರಸಿನ ರಾರಾಜಿಸಿತ್ತು. ಭಕ್ತರು ಮೈ ಮರೆತು, ‘ಮೈಲಾರಲಿಂಗ.. ಮೈಲಾರಲಿಂಗ..’ ಎಂದು ಮಂತ್ರ ಜಪಿಸುತ್ತ ಡೆಂಕನ ಮರಡಿಯಿಂದ ದೇವಸ್ಥಾನದ ವರೆಗೆ ಹೆಜ್ಜೆ ಹಾಕಿದರು. ಇದರಿಂದಾಗಿ ಇಡೀ ಪರಿಸರ ಭಕ್ತಿಯಲ್ಲಿ ಮಿಂದೆದ್ದಿತು.
ಗೊರವಪ್ಪನ ಕಾರಣಿಕ ನುಡಿ ಕೇಳಿಸಿಕೊಂಡ ನಂತರ ಜನ ಅಲ್ಲಿಂದ ಒಮ್ಮೆಗೆ ಹೊರಟಿದ್ದರಿಂದ ಎಲ್ಲೆಡೆ ಕೆಂಧೂಳು ಆವರಿಸಿಕೊಂಡಿತ್ತು. ಜನ ಅದನ್ನು ಲೆಕ್ಕಿಸದೆ ಅವರ ಊರಿನತ್ತ ಹೆಜ್ಜೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.