ADVERTISEMENT

ವಿಜಯನಗರ: ವಿದ್ಯುತ್ ಗೋಪುರ ಸ್ಥಳಾಂತರಕ್ಕೆ ಆಗ್ರಹ

ತಹಶೀಲ್ದಾರ್‌ಗೆ ಕಣಿವಿಹಳ್ಳಿ ಗ್ರಾಮದ ನಿವಾಸಿಗಳ ಮನವಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:50 IST
Last Updated 1 ಜನವರಿ 2026, 7:50 IST
ಹರಪನಹಳ್ಳಿ ತಾಲ್ಲೂಕು ಕಣಿವಿಹಳ್ಳಿ ಗ್ರಾಮದಲ್ಲಿನ ಒಂಟಿ ವಿದ್ಯುತ್ ಗೋಪುರ ಸ್ಥಳಾಂತರಕ್ಕೆ ಆಗ್ರಹಿಸಿ ಕಣಿವಿಹಳ್ಳಿ ದಲಿತ ಸಮುದಾಯದ ಮುಖಂಡರು ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು
ಹರಪನಹಳ್ಳಿ ತಾಲ್ಲೂಕು ಕಣಿವಿಹಳ್ಳಿ ಗ್ರಾಮದಲ್ಲಿನ ಒಂಟಿ ವಿದ್ಯುತ್ ಗೋಪುರ ಸ್ಥಳಾಂತರಕ್ಕೆ ಆಗ್ರಹಿಸಿ ಕಣಿವಿಹಳ್ಳಿ ದಲಿತ ಸಮುದಾಯದ ಮುಖಂಡರು ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು   

ಹರಪನಹಳ್ಳಿ: ತಾಲ್ಲೂಕಿನ ಕಣಿವಿಹಳ್ಳಿ ಗ್ರಾಮದಲ್ಲಿನ 220 ಕೆ.ವಿ. ಒಂಟಿ ವಿದ್ಯುತ್ ಗೋಪುರವನ್ನು ಸ್ಥಳಾಂತರಿಸಬೇಕು ಹಾಗೂ ಹೊಸ ಗೋಪುರ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು ಅವರಿಗೆ ಒತ್ತಾಯಿಸಿದರು.

ಮುಖಂಡ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, ‘ಕಣಿವಿಹಳ್ಳಿಯಲ್ಲಿ ಪರಿಶಿಷ್ಟ ಸಮುದಾಯದ 60ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. 1978ರಲ್ಲಿ ಕೊಪ್ಪಳದ ಲಿಂಗಾಪುರದಿಂದ ಹರಿಹರದ ಗುತ್ತೂರು ವಿದ್ಯುತ್ ಸ್ವೀಕರಣ ಕೇಂದ್ರಕ್ಕೆ 220 ಕೆ.ವಿ. ಹೈ ವೋಲ್ಟೇಜ್ ವಿದ್ಯುತ್ ತಂತಿ ಅಳವಡಿಸಲಾಗಿದೆ. ಆದರೆ ನಮ್ಮ ಗ್ರಾಮದಲ್ಲಿ 1 ಎಕರೆ 57 ಸೆಂಟ್ಸ್ ಭೂಮಿಯನ್ನು ಖಾಸಗಿಯವರಿಂದ ಸರ್ಕಾರವು ಸ್ವಾಧೀನಪಡಿಸಿಕೊಂಡು, ನಮ್ಮ ಕಾಲೊನಿಯ 60 ದಲಿತ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಹಕ್ಕುಪತ್ರ ಕೊಟ್ಟಿದೆ’ ಎಂದರು.

‘ಇದನ್ನು ಲೆಕ್ಕಿಸದ ಕೆಪಿಟಿಸಿಎಲ್‍ ಅಧಿಕಾರಿಗಳು ಭೂ ಪರಿವರ್ತನೆ ಮಾಡಿಕೊಂಡು, ಅಲ್ಲಿ ವಾಸ ಮಾಡುತ್ತಿರುವ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ. ಹೈ ವೋಲ್ಟೆಜ್‍ ವಿದ್ಯುತ್ ಪ್ರಸಾರದ ಪರಿಣಾಮ ಮನೆಯ ಟಿ.ವಿ., ಬಲ್ಬ್‌ಗಳು ಸುಟ್ಟು ಹೋಗುತ್ತಿವೆ’ ಎಂದು ಆರೋಪಿಸಿದರು.

‘ಪ್ರಕರಣ ನ್ಯಾಯಾಲಯದಲ್ಲಿದೆ, ಆದರೂ ಅಧಿಕಾರಿಗಳು ಆದೇಶಕ್ಕೂ ಮುನ್ನವೇ ಕಾಮಗಾರಿ ಮಾಡಲು ಹೊರಟಿರುವುದನ್ನು ನಿಲ್ಲಿಸಬೇಕು. ಈ ಬಗ್ಗೆ ಜಾರಿ ನಿರ್ದೇಶನಾಲಯ, ಮಾನವ ಹಕ್ಕುಗಳ ಆಯೋಗ, ರಾಜ್ಯ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟು ಆಯೋಗಕ್ಕೂ ದೂರು ಸಲ್ಲಿಸಲಾಗಿದೆ. ವಿದ್ಯುತ್ ಗೋಪುರಗಳನ್ನು ಬೇರೆಡೆ ಸ್ಥಳಾಂತರಿಸುವ ತನಕ ಕಾನೂನು ಹೋರಾಟ ನಿಲ್ಲುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಇಟ್ಟಿಗಿ ಸುಮಾ, ಹುಚ್ಚಪ್ಪ, ಕಾಳಪ್ಪ, ಹನುಮಪ್ಪ, ಗೋಣಿಸ್ವಾಮಿ, ಮಲ್ಲಿಕಾರ್ಜುನ, ಜುಂಜಪ್ಪ, ಅನ್ನಪೂರ್ಣ, ಎಸ್.ಕವಿತಾ, ನಾಗರಾಜ್, ಮಮತ, ಶ್ರವಣಕುಮಾರ, ಹನುಮಂತಪ್ಪ, ಎಸ್.ನಿಂಗಪ್ಪ, ಮಂಜುನಾಥ, ಯರಿಯಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.