ADVERTISEMENT

ವಿಜಯನಗರ ಜಿಲ್ಲಾ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 9:52 IST
Last Updated 26 ಜೂನ್ 2022, 9:52 IST
   

ಹೊಸಪೇಟೆ (ವಿಜಯನಗರ): ‘ನೌಕರರ ಹಕ್ಕುಗಳಿಗಾಗಿ ಹೋರಾಡಲು ಸಮನ್ವಯ ಸಮಿತಿ ರಚಿಸಿಕೊಂಡಿರುವುದು ಉತ್ತಮ ಕೆಲಸ. ಆದರೆ, ನೌಕರರ ಸಮಸ್ಯೆಗಳ ಜೊತೆಗೆ ಸಮಾಜದಲ್ಲಿ ನೊಂದವರ, ಅಗತ್ಯವುಳ್ಳವರ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು’ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸಲಹೆ ಮಾಡಿದರು.

ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನದ ಮೂಲಕ ಅಗತ್ಯ ಸೌಲಭ್ಯ ಪಡೆದುಕೊಳ್ಳುವ ವ್ಯವಸ್ಥೆ ಇದ್ದರೂ ಅಸಂಖ್ಯಾತ ಜನ ಅವಕಾಶ ವಂಚಿತರಾಗುತ್ತಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಯಾವುದೇ ಸರ್ಕಾರ ಬಂದರೂ ಅವಕಾಶ ವಂಚಿತರು ಹೆಚ್ಚುತ್ತಲೇ ಇದ್ದಾರೆ. ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅಂತಹವರ ಪರವಾಗಿ ನಿಲ್ಲಬೇಕು’ ಎಂದು ತಿಳಿಸಿದರು.

ADVERTISEMENT

‘ಎಸ್‌ಸಿ/ಎಸ್‌ಟಿ ನೌಕರರಲ್ಲಿ ಅನೇಕ ಜನ ಉತ್ತಮ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳನ್ನು ಪಡೆದಿದ್ದೀರಿ. ನೀವೆಲ್ಲರೂ ನಿಮ್ಮ ಮನೆ, ಸಂಘದ ಚಟುವಟಿಕೆಗಳಿಗೆ ಸೀಮಿತರಾಗಬಾರದು. ಸಮಾಜದಲ್ಲಿ ನಿರ್ಗತಿಕರ ಏಳಿಗೆಗೆ ಶ್ರಮಿಸಬೇಕು. ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಸಮಿತಿ ಜಿಲ್ಲಾ ಅಧ್ಯಕ್ಷ ಜಿ.ಶಿವಕುಮಾರ್ ಮಾತನಾಡಿ, ’ಐಕ್ಯತೆ, ವೈಚಾರಿಕತೆ ಹಾಗೂ ಪ್ರಗತಿ ಎಂಬ ಸಿದ್ಧಾಂತದ ಆಶಯಗಳೊಂದಿಗೆ 2005ರಲ್ಲಿ ಸಂಘ ಸ್ಥಾಪಿಸಲಾಗಿದೆ. ನೂತನ ಜಿಲ್ಲೆಯಾದ ನಂತರ ಜಿಲ್ಲಾ ಘಟಕ ಉದ್ಘಾಟಿಸಲಾಗಿದೆ. ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿದೆ’ ಎಂದರು.

‘ವಿವಿಧ ಇಲಾಖೆಯಲ್ಲಿ ಸಮುದಾಯದ ಸಿಬ್ಬಂದಿಗೆ ಸಿಗಬೇಕಾದ ಸೌಲಭ್ಯ, ಸವಲತ್ತು ಪಡೆದುಕೊಳ್ಳಲು ಸಂಘವನ್ನು ಸ್ಥಾಪಿಸಲಾಗಿದೆ‌. ಸಾಮೂಹಿಕ ಹೋರಾಟದಿಂದ ಸಿಬ್ಬಂದಿಗೆ ಸವಲತ್ತು ಸಿಗುತ್ತದೆ. ಸಂಘದ ಮೂಲಕ ಮುಂದಿನ ದಿನಗಳಲ್ಲಿ ನೌಕರರಿಗೆ ಕಾನೂನು ಅರಿವು ಮೂಡಿಸುವ ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸಲು ದೂರು ಅದಾಲತ್ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಎಸ್‌ಸಿ/ಎಸ್‌ಟಿ ಸಮಾಜದ 25 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯ ಅಧ್ಯಕ್ಷ ಡಿ.ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್‌ಕುಮಾರ್, ಹಿರಿಯ ಉಪಾಧ್ಯಕ್ಷ ಆರ್.ಮೋಹನ್, ಕಾರ್ಯದರ್ಶಿ ಎಚ್.ಗೋಪಾಲಕೃಷ್ಣ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಪದ್ಮಾವತಿ, ಮಾಳಗಿ ರಾಮಸ್ವಾಮಿ, ಸೋಮಶೇಖರ್ ಬಣ್ಣದಮನೆ, ಜಂಬಯ್ಯ ನಾಯಕ, ತಾಯಪ್ಪ ನಾಯಕ, ಗುಜ್ಜಲ ಶಿವಕುಮಾರ್, ಬಸವರಾಜ, ಎಂ.ಪಿ.ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.