ADVERTISEMENT

ತುಂಗಭದ್ರಾ ಜಲಾಶಯದ ಹೂಳು ತೆಗೆಯಲು ಕ್ರಮ ಕೈಗೊಳ್ಳಿ: ವಿ.ಎಸ್‌.ಉಗ್ರಪ್ಪ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 6:32 IST
Last Updated 6 ಜೂನ್ 2023, 6:32 IST
ಪತ್ರಿಕಾಗೋಷ್ಠಿಯಲ್ಲಿ ವಿ.ಎಸ್‌.ಉಗ್ರಪ್ಪ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ವಿ.ಎಸ್‌.ಉಗ್ರಪ್ಪ ಮಾತನಾಡಿದರು   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಲ್ಲಿ 132 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯವಿದ್ದು, ಸದ್ಯ ಸುಮಾರು 37 ಟಿಎಂಸಿ ಅಡಿಯಷ್ಟು ಹೂಳು ತುಂಬಿದೆ. ಹೂಳು ತೆಗೆದು ನಮ್ಮ ಜನರಿಗೆ ನೆರವಾಗುವುದಕ್ಕೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ನಾಯಕ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಮೂರು ರಾ‌ಜ್ಯಗಳಿಗೆ ಸಂಬಂಧಿಸಿದ ವಿಚಾರವಾದ್ದರಿಂದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಕ್ಷಣ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳ ಜತೆಗೆ ಮಾತುಕತೆ ನಡೆಸಿ ಹೂಳು ತೆಗೆಸಲು ಕ್ರಮ ಕೈಗೊಳ್ಳಬೇಕು, ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

’ಹೂಳನ್ನು ರೈತರ ಹೊಲಕ್ಕೆ ಹಾಕಿದರೆ ಅದು ಫಲವತ್ತಾದ ಗೊಬ್ಬರವಾಗುತ್ತದೆ. ಆದರೆ ಇಂತಹ ಪ್ರಯತ್ನವೂ ಇದುವರೆಗೆ ನಡೆದಿಲ್ಲ. ಹೂಳು ತುಂಬಿದಂತೆಲ್ಲ ನಷ್ಟವಾಗುವುದು ರಾಜಕ್ಕೇ. ಹೂಳು ತುಂಬಿದ್ದರಿಂದ ವಾರ್ಷಿಕ 200 ಟಿಎಂಸಿ  ಅಡಿಯಷ್ಟು ನೀರು ಪೋಲಾಗಿ ಹೋಗುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಹೂಳು ತೆಗೆಸಲು ಸರ್ಕಾರ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು‘  ಎಂದು ಉಗ್ರಪ್ಪ ಒತ್ತಾಯಿಸಿದರು.

ADVERTISEMENT

’ಹೂಳು ತೆಗೆಸುವ ವಿಚಾರದಲ್ಲಿ ಆಂಧ್ರ ಅಥವಾ ತೆಲಂಗಾಣ ರಾಜ್ಯಗಳು ತಗಾದೆ ತೆಗೆಯುವ ಸಾಧ್ಯತೆ ಇಲ್ಲದಿಲ್ಲ, ಆದರೆ ರಾಷ್ಟ್ರೀಯ ನೀರು ಯೋಜನೆ ಪ್ರಕಾರ ಕುಡಿಯುವ ನೀರು ಮೂಲಭೂತ ಹಕ್ಕಾಗಿದ್ದು, ಅಂತರರಾಜ್ಯ ನೀರು ವಿವಾದ  ಕಾಯ್ದೆ ಪ್ರಕಾರವೂ ಈ ವಿಚಾರದಲ್ಲಿ ರಾಜ್ಯ ಹೋರಾಟ ನಡೆಸಬಹುದು. ಹೀಗಾಗಿ ಈಗಿನಿಂದಲೇ ಪ್ರಯತ್ನ ಆರಂಭವಾದರೆ ಮಾತ್ರ ನಮ್ಮ ಜನರಿಗೆ ನ್ಯಾಯ ಸಿಗಲು ಸಾಧ್ಯವಿದೆ‘ ಎಂದು ಅವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌  ಪಕ್ಷ ನುಡಿದಂತೆ ನಡೆಯುತ್ತಿದೆ, ಆದರೆ ಬಿಜೆಪಿ ಕೊಟ್ಟ ಭರವಸೆಗಳನ್ನು ಈಡೇರಿಸದೆ ಜನರಿಗೆ ವಂಚಿಸಿದೆ. ಹೀಗಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಲು ನಿಶ್ಚಿತ ಎಂದು ಅವರು ತಿಳಿಸಿದರು.

ಭ್ರಷ್ಟಾಚಾರ–ಕ್ರಮ ನಿಶ್ಚಿತ: ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಹೊಸಪೇಟೆಯಲ್ಲಿ ಟೆಂಡರ್‌ ಕರೆಯದೆ ಕಾಮಗಾರಿ ನಡೆಸಿ ಅಕ್ರಮ ಎಸಗಿದ್ದರ ಬಗ್ಗೆ ಪ್ರಸ್ತಾಪಿಸಿದ ಉಗ್ರಪ್ಪ, ಯಾವುದೇ ಬಗೆಯ ಭ್ರಷ್ಟಾಚಾರವನ್ನು ಕಾಂಗ್ರೆಸ್ ಸಹಿಸುವುದಿಲ್ಲ, ಇಲ್ಲಿ ಆಗಿರುವ ಅಕ್ರಮಗಳ ಬಗ್ಗೆಯೂ ಕ್ರಮ ಕೈಗೊಳ್ಳಲಿದೆ ಎಂದರು.

ಪಕ್ಷದ ಮುಖಂಡರಾದ ಗುಜ್ಜಲ್‌ ನಾಗರಾಜ್‌, ವಿನಾಯಕ ಶೆಟ್ಟರ್‌, ನಿಂಬಗಲ್‌ ರಾಮಕೃಷ್ಣ, ಪಿ.ಬಾಬು, ಜಾವೆದ್‌, ಅನಂತಸ್ವಾಮಿ, ಪಿ.ವೀರಾಂಜನೇಯ, ಪತ್ರೇಶ್‌ ಹಿರೇಮಠ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.