ಹೊಸಪೇಟೆ: ನಗರ, ತಾಲ್ಲೂಕಿನ ವಿವಿಧೆಡೆ ಹಾಗೂ ಜಿಲ್ಲೆಯ ನಾನಾ ಭಾಗದಲ್ಲಿನ ರಾಯರ ಮಠಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಎಲ್ಲೆಡೆ ಮಹಾರಥೋತ್ಸವ ನಡೆಯಿತು.
ನಗರದ ರಾಣಿಪೇಟೆ ರಾಯರ ಮಠದಲ್ಲಿ ಉತ್ತರಾರಾಧನೆ ಪ್ರಯುಕ್ತ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೈದ್ಯ, ಹಸ್ತೋದಕ ಜರುಗಿತು. ಅಲಂಕಾರ ಪಂಕ್ತಿ, ಭಕ್ತರಿಗೆ ಅನ್ನದಾನ ನೆರವೇರಿಸಲಾಯಿತು. ಬೆಳಿಗ್ಗೆ ಪ್ರಮುಖ ಮಾರ್ಗದಲ್ಲಿ ಉತ್ಸವಮೂರ್ತಿ ರಥೋತ್ಸವ ನಡೆಯಿತು.
ಭಜನೆ, ಕೀರ್ತನೆಗಳೊಂದಿಗೆ ನೆರವೇರಿಸಲಾಯಿತು. ಮಠದ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಮಾರುತಿ ಆಚಾರ್ಯ ಇತರರಿದ್ದರು.
ಗಾಂಧಿ ಕಾಲೋನಿ, ವಿಜಯ ಚಿತ್ರಮಂದಿರ ಸಮೀಪದ ರಾಯರ ಮಠಗಳಲ್ಲಿ ಸಹ ಭಕ್ತಿಯಿಂದ ಉತ್ತರಾರಾಧನೆ ನಡೆಯಿತು.
ಟಿ.ಬಿ.ಡ್ಯಾಂ ಮಾರುತಿ ಕಾಲೋನಿಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿನ ರಾಯರ ಬೃಂದಾವನಕ್ಕೆ ಬೆಳ್ಳಿ ಕವಚ ತೊಡಿಸಿ ಆರಾಧನೆ ಮಾಡಲಾಯಿತು. ಕಳೆದ 45 ವರ್ಷಗಳಿಂದ ಇಲ್ಲಿ ಆರಾಧನೆ ನಡೆಯುತ್ತಿದೆ. ಶ್ರಾವಣ ಮಾಸದಲ್ಲಿ ದೊರೆಯುವ ಎಲ್ಲಾ ಫಲಗಳನ್ನು ಪಂಚಾಮೃತಕ್ಕೆ ಬಳಸಲಾಯಿತು.
ತಾಲ್ಲೂಕಿನ ಕಮಲಾಪುರ ಪಟ್ಟಣದ ಶ್ರೀರಾಯರ ಮಠದಲ್ಲಿ ವಿಶೇಷವಾಗಿ ಉತ್ತರಾರಾಧನೆ ನಡೆಯಿತು. ವ್ಯವಸ್ಥಾಪಕ ಗುಂಜಳ್ಳಿ ಟೀಕಾಚಾರ್ಯ, ಮಂತ್ರಾಲಯ ಗುರುಸಾರ್ವಭೌಮರ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ, ಹರಿಗೌಡ, ಧೀರೇಂದ್ರ ಆಚಾರ್ಯ, ವಾದಿರಾಜ್ ಇತರರಿದ್ದರು. ಮಹಿಳೆಯರಿಂದ ಭಜನೆ ನಡೆಯಿತು.
ವೈಭವದ ಮೆರವಣಿಗೆ
ಮರಿಯಮ್ಮನಹಳ್ಳಿ: ಪಟ್ಟಣದಲ್ಲಿ ಮಂಗಳವಾರ ರಾಘವೇಂದ್ರಸ್ವಾಮಿಗಳ 354ನೇ ಆರಾಧನ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಆರಾಧನೆ ಅಂಗವಾಗಿ ಬೆಳಿಗ್ಗೆ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಅಷ್ಟೋತ್ತರ, ಲಲಿತ ಸಹಸ್ರನಾಮ, ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
10ಗಂಟೆಗೆ ಮಠದಿಂದ ಆರಂಭವಾದ ರಾಯರ ಭಾವಚಿತ್ರದ ಮೆರವಣಿಗೆ ಮುಖ್ಯಬೀದಿಗಳಲ್ಲಿ ಸಾಗಿತು. ನಂತರ ಶ್ರೀಲಕ್ಷ್ಮಿನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮುಖ್ಯವೃತ್ತ ಬಳಿಸಿಕೊಂಡು ವೆಂಕಟಾಪುರ ರಸ್ತೆಯ ಮೂಲಕ ಪುನಃ ಮಠಕ್ಕೆ ತೆರಳಿತು.
ಮಧ್ಯಾಹ್ನ 12ಕ್ಕೆ ಮಠದಲ್ಲಿ ರಾಯರ ಜಯಘೋಷಗಳೊಂದಿಗೆ ರಥೋತ್ಸವ ಜರುಗಿತು. ರಥೋತ್ಸವದಲ್ಲಿ ಬ್ರಾಹ್ಮಣ ಸಮಾಜದ ಹಿರಿಯರು, ಮಹಿಳೆಯರು, ಮಕ್ಕಳು ಹಾಗೂ ಯುವಕರು ಸೇರಿದಂತೆ ರಾಯರ ಸೇವಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಸಂಭ್ರಮದ ರಥೋತ್ಸವ
ಹೂವಿನಹಡಗಲಿ: ಪಟ್ಟಣದಲ್ಲಿ ಮಂಗಳವಾರ ರಾಘವೇಂದ್ರ ಸ್ವಾಮಿ ರಥೋತ್ಸವ ಜರುಗಿತು.
ರಾಯರ 354ನೇ ಆರಾಧನಾ ಮಹೋತ್ಸವ ಅಂಗವಾಗಿ ರಾಘವೇಂದ್ರ ಮಠದಲ್ಲಿನ ಬೃಂದಾವನಕ್ಕೆ ಬೆಳಿಗ್ಗೆ ಪಂಚಾಮೃತ ಅಭಿಷೇ ನೆರವೇರಿಸಲಾಯಿತು. ವಿಷ್ಣು ಸಹಸ್ರನಾಮ, ವಾಯುಸ್ತುತಿ ಪುನಶ್ಚರಣ, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಜರುಗಿತು. ನಂತರ ಕನಕಾಭಿಷೇಕದೊಂದಿಗೆ ಪಲ್ಲಕ್ಕಿ ಉತ್ಸವ ನೆರವೇರಿತು.
ರಾಯರ ಭಜನೆಯೊಂದಿಗೆ ಕೋಟೆ ಪ್ರದೇಶದ ಮಹಾದ್ವಾರದವರೆಗೆ ರಥೋತ್ಸವ ಜರುಗಿತು. ಮಠದ ಧರ್ಮಕರ್ತ ವೇಣುಗೋಪಾಲ ಆಚಾರ್, ಎಸ್.ಅಶ್ವಥ ನಾರಾಯಣ, ಜಿತಾಮಿತ್ರಾಚಾರ್ಯ ಡಾ. ಫಣಿರಾಜ್, ಕೇಶವಮೂರ್ತಿ ಗೋಸಾವಿ, ರಾಘವೇಂದ್ರ ಆಚಾರ್ ಇದ್ದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.